ಬಿಜೆಪಿಗರಿಂದ ಮೇಯರ್ ವಿರುದ್ಧ ಸುಳ್ಳು ಆರೋಪ : ಶಶಿಧರ ಹೆಗ್ಡೆ

ಮಂಗಳೂರು, ಅ. 28: ಬಿಜೆಪಿಯ ಕೆಲವರು ಸುಳ್ಳು ಆರೋಪ ಮಾಡಿ ಮೇಯರ್ ಕವಿತಾ ಸನಿಲ್ ಅವರ ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ ಎಂದು ಪಾಲಿಕೆಯ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಹೇಳಿದ್ದಾರೆ.
ವಾಚ್‌ಮ್ಯಾನ್ ಕುಟುಂಬದ ಮೇಲೆ ಮೇಯರ್ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯ ಸದಸ್ಯರೊಳಗೆ ಅಭಿಪ್ರಾಯಭೇದ ಇರಬಹುದು. ಆದರೆ ಇಂತಹ ಕ್ಷುಲ್ಲಕ ವಿಚಾರಕ್ಕಾಗಿ ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಕವಿತಾ ಸನಿಲ್ ದೀಪಾವಳಿ ಸಮಯದಲ್ಲಿ ಬೆಂಗಳೂರಿಗೆ ತೆರಳಿದ್ದರು. ಅವರ ಪುತ್ರಿ ಮತ್ತಾಕೆಯ ಗೆಳತಿಯರು ಪಟಾಕಿ ಸಿಡಿಸುವಾಗ ಮಕ್ಕಳಲ್ಲಿ ಸಹಜವಾಗಿ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ವಾಚ್‌ಮ್ಯಾನ್ ಅವರ ಪತ್ನಿ, ಕವಿತಾ ಸನಿಲ್ ಅವರ ಪುತ್ರಿಯನ್ನು ಅಟ್ಟಿಸಿಕೊಂಡು ಹೋಗಿದ್ದರು. ಬಳಿಕ ಪುತ್ರಿ ಪಕ್ಕದ ಮನೆಗೆ ಹೋಗಿದ್ದು ಅವರು ವಾಪಸ್ ಮೇಯರ್ ಮನೆಗೆ ಕರೆತಂದು ಬಿಟ್ಟಿದ್ದರು. ಮನೆಗೆ ಮರಳಿದ ಕವಿತಾ ಸನಿಲ್, ವಿಷಯ ತಿಳಿದು ವಾಚ್‌ಮ್ಯಾನ್ ಕುಟುಂಬವನ್ನು ಈ ಕುರಿತು ವಿಚಾರಿಸಿದ್ದಾರೆ. ಇದಾದ ಬಳಿಕ ಬಿಜೆಪಿಯ ರೂಪಾ ಬಂಗೇರ ಮತ್ತು ಪೂಜಾರಿ ಪೈ ಸ್ಥಳಕ್ಕೆ ಬಂದು ವಾಚ್‌ಮ್ಯಾನ್ ಕುಟುಂಬದ ಬಳಿ 20 ನಿಮಿಷ ಮಾತನಾಡಿದ್ದಾರೆ. ತಕ್ಷಣದಿಂದಲೇ ಜಾಲತಾಣಗಳಲ್ಲಿ ಮೇಯರ್ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಶಶಿಧರ ಹೆಗ್ಡೆ ಆರೋಪಿಸಿದರು.
ಕಾಂಗ್ರೆಸ್‌ನ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ರಜನೀಶ್, ಹರಿನಾಥ್ ಬೋಂದೆಲ್, ನವೀನ್ ಡಿಸೋಜ, ಸಬಿತಾ ಮಿಸ್ಕಿತ್, ರಾಧಾಕೃಷ್ಣ, ಪ್ರಕಾಶ್, ಬಶೀರ್ ಅಹ್ಮದ್, ನಝೀರ್ ಬಜಾಲ್ ಉಪಸ್ಥಿತರಿದ್ದರು.





