ಗುಂಡಿಕ್ಕಿ ಪತ್ನಿಯ ಹತ್ಯೆಗೆ ಯತ್ನ: ದೂರು
ಮಡಿಕೇರಿ, ಅ.28: ಕೌಟುಂಬಿಕ ಕಲಹಗಳ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬಾತ ಗುಂಡಿಕ್ಕಿ ಪತ್ನಿಯನ್ನು ಹತ್ಯೆಗೈಯಲು ಯತ್ನಿಸಿರುವ ಘಟನೆ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ.
ಹಮ್ಮಿಯಾಲ ಗ್ರಾಮದ ಕೊಚ್ಚೇರ ರಮ್ಯ(21) ಎಂಬವರ ಪತಿಯ ಗುಂಡೇಟಿಗೆ ಸಿಲುಕಿ ಗಾಯಗೊಂಡ ಮಹಿಳೆಯಾಗಿದ್ದು. ದುಷ್ಕೃತ್ಯವೆಸಗಿದ ಈಕೆಯ ಪತಿ ಕೊಚ್ಚೇರ ನಂದ ಪಳಂಗಪ್ಪನ ಬಂಧನಕ್ಕಾಗಿ ವೀರಾಜಪೇಟೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ವೀರಾಜಪೇಟೆ ತಾಲೂಕಿನ ಕೆದಮಳ್ಳೂರು ಗ್ರಾಮದ ಮುಕ್ಕಾಟಿರ ಕುಟುಂಬದ ರಮ್ಯ, ಮೂರು ವರ್ಷಗಳ ಹಿಂದೆ ಮಡಿಕೇರಿ ತಾಲೂಕಿನ ಹಮ್ಮಿಯಾಲ ಗ್ರಾಮದ ಕೊಚ್ಚೇರ ನಂದ ಪಳಂಗಪ್ಪ ಅವರನ್ನು ವಿವಾಹವಾಗಿದ್ದರು. ಬಳಿಕ ಕೆಲ ತಿಂಗಳಲ್ಲೇ ಪತಿ ಪತ್ನಿಯ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಕಲಹ ನಡೆಸುತ್ತಿದ್ದರು ಎನ್ನಲಾಗಿದೆ. ಇದರ ನಡುವೆ ನಂದ ಪಳಂಗಪ್ಪ ಮಕ್ಕಂದೂರು ಗ್ರಾಮದ ಶೆಟ್ಟಿಬಾಣೆ ತೋಟದಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದರು.
ಪತಿಯ ಕಿರುಕುಳ ಹಿನ್ನೆಲೆಯಲ್ಲಿ ರಮ್ಯ ಕೆಲ ದಿನಗಳ ಹಿಂದೆ ಕೆದಮುಳ್ಳೂರಿನ ತನ್ನ ತವರು ಮನೆಗ ಮಕ್ಕಳೊಂದಿಗೆ ಬಂದು ನೆಲೆಸಿದ್ದರು. ಇಂದು ಬೆಳಗ್ಗೆ ಏಕಾಏಕಿ ಮನೆಗೆ ಬಂದ ನಂದಾ ಪಳಂಗಪ್ಪ ಪತ್ನಿಯ ಮೇಲೆ ಗುಂಡಿಕ್ಕಿ ಪರಾರಿಯಾಗಿದ್ದು, ಗಂಭೀರ ಸ್ವರೂಪದಲ್ಲಿ ಗಾಯಗೊಂಡ ರಮ್ಯಳನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳು ರಮ್ಯ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.







