ಕುಡಿಯುವ ನೀರು ಸರಬರಾಜಿಗೆ ಒತ್ತಾಯಿಸಿ ನಾಗರಿಕರಿಂದ ರಸ್ತೆತಡೆ

ಮಂಡ್ಯ, ಅ.28:ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುತ್ತಿಲ್ಲವೆಂದು ನಾಗರಿಕರು ಬೆಳಗ್ಗೆ ನಗರದ ಬನ್ನೂರು ರಸ್ತೆಯ ಡಾ.ಅಂಬೇಡ್ಕರ್ ವೃತ್ತದಲ್ಲಿ ರಸ್ತೆತಡೆ ನಡೆಸಿದರು.
ಅಫಿಷಿಯಲ್ ಕ್ವಾರ್ಟರ್ಸ್‍ನ ನಿವಾಸಿಗಳು ಖಾಲಿ ಕೊಡಗಳೊಂದಿಗೆ ರಸ್ತೆತಡೆ ನಡೆಸಿದ್ದರಿಂದ ಬನ್ನೂರು ಮಾರ್ಗದ ಬಸ್, ಇತರೆ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು.
ಈ ವೇಳೆ ಸ್ಥಳಕ್ಕಾಗಮಿಸಿದ ನಗರಸಭಾ ಸದಸ್ಯೆ ಮಧುಶ್ರೀ ಮಾತನಾಡಿ, ವಾಹನ ಸಂಚಾರಕ್ಕೆ ತೊಂದರೆ ಕೊಡಬಾರದೆಂದು ಸಲಹೆ ನೀಡಿದರು. ಇದಕ್ಕೆ ಕೆರಳಿದ ಪ್ರತಿಭಟನಾಕಾರರು ಅವರನ್ನು ತರಾಟೆಗೆ ತೆಗೆದುಕೊಂಡರು.
ಬಡಾವಣೆಗೆ ಸರಿಯಾಗಿ ಕುಡಿಯುವ ನೀರು ಸರಬರಾಜಾಗತ್ತಿಲ್ಲ. ವಾರವಾದರೂ ನೀರು ಕೊಡುವುದಿಲ್ಲ. ಜಲಮಂಡಳಿ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಇನ್ನು ಮುಂದೆ ಯಾವುದೇ ತೊಂದರೆ ಇಲ್ಲದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ, ನಾಗರಿಕರು ಪ್ರತಿಭಟನೆ ಹಿಂದಕ್ಕೆ ಪಡೆದರು.
Next Story





