ಕಂಚಾ ಐಲಯ್ಯ ಅವರಿಗೆ ಹೈದರಾಬಾದ್‌ನಲ್ಲಿ ಗೃಹಬಂಧನ

ಹೈದರಾಬಾದ್, ಅ. 28: ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಲು ವಿಜಯವಾಡಕ್ಕೆ ತೆರಳುವುದನ್ನು ತಡೆಯಲು ದಲಿತ ಲೇಖಕ, ಸಾಮಾಜಿಕ ಹೋರಾಟಗಾರ ಕಂಚಾ ಐಲಯ್ಯ ಅವರನ್ನು ಪೊಲೀಸರು ಶನಿವಾರ ಗೃಹಬಂಧನದಲ್ಲಿ ಇರಿಸಿದರು.
ಟರ್ನಕಾದಲ್ಲಿರುವ ಕಂಚಾ ಐಲಯ್ಯ ಅವರ ನಿವಾಸದ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿವಾಸದ ಹೊರಗಡೆ ಹೆಜ್ಜೆ ಇರಿಸಿದರೆ, ಬಂಧಿಸಲಾಗುವುದು ಎಂದು ಐಲಯ್ಯ ಅವರಿಗೆ ಆಂಧ್ರಪ್ರದೇಶದ ಪೊಲೀಸ್ ತಂಡ ತಾಕೀತು ಮಾಡಿತ್ತು.
ಈ ಸಂದರ್ಭ ಐಲಯ್ಯ ಅವರ ನಿವಾಸದ ಎದುರು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನಗರದಲ್ಲಿ ನಿಷೇಧಾಜ್ಞೆ ಹೇರಿರುವುದರಿಂದ ವಿಜಯವಾಡದಲ್ಲಿ ಸಾರ್ವಜನಿಕ ಸಭೆ ನಡೆಸಲು ಅನುಮತಿ ನೀಡಲಾಗು ವುದಿಲ್ಲ ಎಂದು ಪೊಲೀಸ್ ತಂಡ ಶುಕ್ರವಾರ ಐಲಯ್ಯ ಅವರಿಗೆ ನೋಟಿಸು ಜಾರಿ ಮಾಡಿ ತಿಳಿಸಿತ್ತು.
ಆರ್ಯ ವೈಶ್ಯ ಸಮುದಾಯದ ವಿವಿಧ ಗುಂಪುಗಳಿಂದ ಬೆದರಿಕೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಐಲಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಲು ಕೆಲವು ದಲಿತ ಹಾಗೂ ಹಿಂದುಳಿದ ವರ್ಗಗಳ ಸಂಘಟನೆಗಳು ವಿಜಯವಾಡ ದಲ್ಲಿ ಸಭೆ ಆಯೋಜಿಸಿತ್ತು.
Next Story





