ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ: ಅಹಿಂದ ವೇದಿಕೆ ಖಂಡನೆ
ಮಂಡ್ಯ, ಅ.28: ರಾಷ್ಟ್ರಪ್ರೇಮಿ ಟಿಪ್ಪುಸುಲ್ತಾನ್ ಜಯಂತಿ ಆಚರಣೆಗೆ ಅಡ್ಡಿಪಡಿಸುತ್ತಿರುವ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಿಂದ ಸಾಮಾಜಿಕ ಸೌಹಾರ್ದ ಹದಗೆಡುತ್ತಿದೆ ಎಂದು ಅಖಿಲ ಕರ್ನಾಟಕ ಅಹಿಂದ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷ ಮಂಡಿಬೆಟ್ಟಹಳ್ಳಿ ಎನ್.ಬಸವರಾಜು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಕೋಮು ಸೌಹಾರ್ದಕ್ಕೆ ಹೆಸರಾಗಿದೆ. ಆದರೆ, ಇತ್ತೀಚೆಗೆ ಕೆಲವು ಕೋಮುಶಕ್ತಿಗಳು ಟಿಪ್ಪುವಿನ ರಾಷ್ಟ್ರ ಪ್ರೇಮದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲ ಸಮುದಾಯದ ವಿಶ್ವಾಸಗಳಿಸಿ ಆ ಜನಾಂಗದ ಮಹಾ ಪುರುಷರ ಜಯಂತಿ ಆಚರಿಸಲು ಆದೇಶ ಮಾಡಿದ್ದಾರೆ. ಇದರಲ್ಲಿ ಟಿಪ್ಪು ಜಯಂತಿಯು ಕೂಡ ಒಂದು. ಇದಕ್ಕೆ ಕೆಲವರು ರಾಜಕೀಯ ಬಣ್ಣಹಚ್ಚಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಟಿಪ್ಪು ಎಲ್ಲ ಸಮುದಾಯದವರನ್ನು ಪ್ರಿತಿಸುತ್ತಿದ್ದ. ನಂಜನಗೂಡಿನ ನಂಜುಂಡೇಶ್ವರನನ್ನು ಹಕೀಂ ನಂಜುಂಡ ಎಂದು ಪ್ರೀತಿಯಿಂದ ನಾಮಕರಣ ಮಾಡಿದ್ದ, ಶೃಂಗೇರಿಯ ಶಾರದಾ ಪೀಠಕ್ಕೆ ವಿಧೇಯನಾಗಿ ರಕ್ಷಣೆ ಮಾಡಿದ ಇತಿಹಾಸವಿದೆ. ಇದನ್ನು ಕೋಮುವಾದಿಗಳು ಅರ್ಥೈಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಕೋಮು ಶಕ್ತಿಗಳು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಹಣಿಯುವ ಸಲುವಾಗಿ ಹಾಗು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಟಿಪ್ಪು ಜಯಂತಿ ಆಚರಣೆಗೆ ವಿರೋಧಿಸುತ್ತಿದ್ದಾರೆ. ಆದರೆ, ಟಿಪ್ಪು ಜಯಂತಿ ವಿಚಾರದಲ್ಲಿ ಸರಕಾರದ ನಿಲುವನ್ನು ತಮ್ಮ ವೇದಿಕೆ ಗೌರವಿಸುತ್ತದೆ ಅವರು ತಿಳಿಸಿದ್ದಾರೆ.







