‘ಛತ್‌ಪೂಜೆ’ : ನೀರಲ್ಲಿ ಮುಳುಗಿ 17 ಮಂದಿ ಸಾವು

ಪಾಟ್ನ, ಅ.28: ‘ಛಾತಿ ಮಾಯಿ’ (ಛಾತಿ ದೇವಿ, ಪುರಾಣದ ಪ್ರಕಾರ ಸೂರ್ಯದೇವನ ಪತ್ನಿ)ಗೆ ನೀರಿನಲ್ಲಿ ನಿಂತು ಅರ್ಘ್ಯಪ್ರಧಾನ ಮಾಡುವ ಛತ್‌ಪೂಜೆ ಅರ್ಘ್ಯ ಕಾರ್ಯಕ್ರಮದ ಸಂದರ್ಭ ರಾಜ್ಯದ ವಿವಿಧೆಡೆ ಕನಿಷ್ಟ 17 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಬಿಹಾರದ ಭಾಗಲ್‌ಪುರ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಸಮಷ್ಟಿಪುರದಲ್ಲಿ ಕೆರೆಯೊಂದರಲ್ಲಿ ಅರ್ಘ್ಯಪ್ರಧಾನ ಮಾಡುವ ಸಂದರ್ಭ 13 ಹಾಗೂ 10ರ ಹರೆಯದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರೆ, ದಲ್‌ಸಿಂಗ್ ಸರಾಯ್‌ನಲ್ಲಿ 18ರ ಹರೆಯದ ಯುವತಿಯೋರ್ವಳು ಮೃತಪಟ್ಟಿದ್ದಾಳೆ.
ಬಂಕ ಜಿಲ್ಲೆಯಲ್ಲಿ ಆರು ವರ್ಷದ ಬಾಲಕ ಸೇರಿದಂತೆ ಮೂವರು, ಅರಾರಿಯ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಾಧೇಪುರ, ಅರ್ವಾಲ್, ಮುಝಫರ್‌ಪುರ, ವೈಶಾಲಿ ಜಿಲ್ಲೆಯಲ್ಲೂ ಜನ ಮೃತಪಟ್ಟ ವರದಿಯಾಗಿದೆ. ಮುಂಗೇರ್ ಜಿಲ್ಲೆಯಲ್ಲಿ ದೋಣಿಯೊಂದು ಮುಳುಗಿದ ಘಟನೆ ನಡೆದರೂ ಯಾವುದೇ ಪ್ರಾಣಾಪಾಯವಾಗಿಲ್ಲ. ಮೃತ ವ್ಯಕ್ತಿಗಳ ಕುಟುಂಬದವರಿಗೆ ಸರಕಾರಿ ನಿಯಮದಂತೆ ಪರಿಹಾರ ಧನ ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.





