2,000 ಮತ್ತು 200 ರೂ.ನೋಟುಗಳ ಬಿಡುಗಡೆ ಅಧಿಕಾರ ಆರ್‌ಬಿಐಗೆ ಇತ್ತೇ?
ಆರ್‌ಟಿಐ ಅರ್ಜಿಗೆ ಸಿಕ್ಕಿಲ್ಲ ಸಮರ್ಪಕ ಉತ್ತರ..!

ಹೊಸದಿಲ್ಲಿ,ಅ.28: ಆರ್‌ಬಿಐ ವಿಲಕ್ಷಣ ಸ್ಥಿತಿಯೊಂದನ್ನು ಎದುರಿಸುತ್ತದೆ. ನೋಟು ಅಮಾನ್ಯದ ಬಳಿಕ 2,000 ಮತ್ತು 200 ರೂ.ಮುಖಬೆಲೆಗಳ ಹೊಸ ನೋಟುಗಳನ್ನು ಹೊರಡಿಸಲು ತನಗೆ ಅಧಿಕಾರವಿತ್ತು ಎನ್ನುವುದನ್ನು ಸಾಬೀತುಗೊಳಿಸಲು ಅದರ ಬಳಿ ಯಾವುದೇ ಅಧಿಕೃತ ದಾಖಲೆಗಳು ಇಲ್ಲವೆಂಬಂತೆ ಕಂಡು ಬರುತ್ತಿದೆ. ಇದನ್ನು ಆರ್‌ಟಿಐ ಅರ್ಜಿಯೊಂದು ಬಯಲಿಗೆಳೆದಿದೆ.
ಆರ್‌ಟಿಐ ಅರ್ಜಿಗೆ ಆರ್‌ಬಿಐ ಒದಗಿಸಿರುವ ಉತ್ತರಗಳಂತೆ ಅದು ಹೊಸ 2,000 ರೂ.ನೋಟುಗಳನ್ನು ಮತ್ತು ಇತ್ತೀಚಿಗೆ 200 ರೂ.ನೋಟುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಯಾವುದೇ ಸರಕಾರಿ ನಿರ್ಣಯ(ಜಿಆರ್) ಅಥವಾ ಸುತ್ತೋಲೆಯನ್ನು ಈವರೆಗೆ ಪ್ರಕಟಿಸಿಲ್ಲ ಎಂದು ಮುಂಬೈನ ಆರ್‌ಟಿಐ ಕಾರ್ಯಕರ್ತ ಎಂ.ಎಸ್.ರಾಯ್ ಹೇಳಿದ್ದಾರೆ.
ಆರ್‌ಬಿಐನ ಕಾರ್ಯಕಾರಿ ನಿರ್ದೇಶಕರೋರ್ವರು ಮಂಡಿಸಿದ್ದ ಪ್ರಸ್ತಾವವೊಂದನ್ನು ಬ್ಯಾಂಕಿನ ಆಡಳಿತ ಮಂಡಳಿಯು 2016,ಮೇ 18ರಂದು,ಅಂದರೆ ನೋಟು ನಿಷೇಧಕ್ಕೆ ಸುಮಾರು ಆರು ತಿಂಗಳು ಮೊದಲು ಅಂಗೀಕರಿಸಿತ್ತು ಎನ್ನುವುದನ್ನು ಮೇ 19ರ ದಾಖಲೆಯು ತೋರಿಸಿದೆ.
ಆಡಳಿತ ಮಂಡಳಿ ಸಭೆಯ ನಡಾವಳಿಗಳಂತೆ ಭವಿಷ್ಯದಲ್ಲಿ ನೋಟುಗಳ ನೂತನ ವಿನ್ಯಾಸ, ಗಾತ್ರ ಮತ್ತು ಮುಖಬೆಲೆಗಳಿಗೆ ಈ ಪ್ರಸ್ತಾವವು ಸಂಬಂಧಿಸಿದ್ದು, ಅದನ್ನು ಕೇಂದ್ರ ಸರಕಾರದ ಒಪ್ಪಿಗೆಗಾಗಿ ಕಳುಹಿಸಲು ಆಡಳಿತ ಮಂಡಳಿಯು ನಿರ್ಧರಿಸಿತ್ತು.
ವಾಸ್ತವದಲ್ಲಿ ಇದು ಗಾತ್ರವನ್ನು ಕಿರಿದುಗೊಳಿಸಿದ 10,20,50,100 ಮತ್ತು 500 ರೂ.ಮುಖಬೆಲೆಗಳ ಹೊಸನೋಟುಗಳನ್ನು ಬಿಡುಗಡೆಗೊಳಿಸುವ,1993,ಜು.8ರ ಇಂತಹುದೇ ಪ್ರಸ್ತಾವದ ಮುಂದುವರಿದ ಭಾಗವಾಗಿತ್ತು.
1993,ಜು.8ರ ಈ ಹಳೆಯ ಪ್ರಸ್ತಾವವನ್ನು ಆರ್‌ಬಿಐ ಆಡಳಿತ ಮಂಡಳಿಯು 1993,ಜ.15ರಂದು ಅಂಗೀಕರಿಸಿತ್ತು. ಈ ಪ್ರಸ್ತಾವದಂತೆ ಕಡಿಮೆ ಗಾತ್ರದ ಈ ನೂತನ ಭಾರತೀಯ ಕರೆನ್ಸಿ ನೋಟುಗಳು ವಂಚನೆಯನ್ನು ತಡೆಯಲು ಹಲವಾರು ತಾಜಾ ಮತ್ತು ಹೆಚ್ಚಿನ ಸುರಕ್ಷತಾ ವೈಶಿಷ್ಟಗಳನ್ನು ಹೊಂದಿರಲಿದ್ದವು.
ಒಂದು ರೂ.ನೋಟಿನ ಮೇಲೆ ಮಹಾತ್ಮಾ ಗಾಂಧಿಯವರ ಚಿತ್ರವಿಲ್ಲ,ಆದರೆ 5ರೂ.ನಿಂದ 2000 ರೂ.ಮುಖಬೆಲೆಯವರೆಗಿನ ಎಲ್ಲ ನೋಟುಗಳ ಮೇಲೆ ಈ ಚಿತ್ರವಿದೆ. ಈ ಕುರಿತೂ ದಾಖಲೆಗಳನ್ನು ಕೋರಿ ರಾಯ್ 2017,ಫೆ.27ರಂದು ಪ್ರತ್ಯೇಕ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ್ದರು. ಇದಕ್ಕೆ ನೀಡಿರುವ ಉತ್ತರದಲ್ಲಿ ಆರ್‌ಬಿಐ 1993,ಜು.15,1994,ಜು.13 ಮತ್ತು 2016,ಮೇ 19ರಂದು ನಡೆದಿದ್ದ ತನ್ನ ಆಡಳಿತ ಮಂಡಳಿ ಸಭೆಗಳ ನಿರ್ಣಯಗಳನ್ನು ಒದಗಿಸಿದೆ.
ಆದರೆ ಈ ನಿರ್ಣಯಗಳು ಗಾಂಧಿ ಚಿತ್ರವನ್ನು ಹೊಂದಿರುವ 10,20,50,100 ಮತ್ತು 500ರೂ.ಮುಖಬೆಲೆಗಳ, ಕಡಿಮೆ ಗಾತ್ರದ ನೋಟುಗಳ ಬಗ್ಗೆ ಮಾತ್ರ ಮಾತನಾಡಿದ್ದವು. ಬಡಪಾಯಿ ಒಂದು ರೂ.ನೋಟು ಇಲ್ಲಿ ಹತ್ತಿರಕ್ಕೂ ಸುಳಿದಿರಲಿಲ್ಲ.
ಈ ನಿರ್ಣಯಗಳ ಪೈಕಿ ಯಾವುದರಲ್ಲಿಯೂ 1000,2000 ಮತ್ತು ಈಗ 200 ರೂ.ನೋಟುಗಳ ಮೇಲಿನ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಹೊಂದಿದ ವಿನ್ಯಾಸವನ್ನು ಉಲ್ಲೇಖಿಸಿರಲಿಲ್ಲ
ಹೀಗಾಗಿ ಆರ್‌ಬಿಐ ಮಂಡಳಿಯ ನಿರ್ಣಯಗಳು ಹಾಲಿ ಅಮಾನ್ಯಗೊಂಡಿರುವ 1000 ರೂ, ನೋಟು ಅಮಾನ್ಯದ ಬಳಿಕ ಬಿಡುಗಡೆಯಾಗಿರುವ 2000 ಮತ್ತು 200 ರೂ.ನೋಟುಗಳ ಮೇಲೆ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಮುದ್ರಿಸಬೇಕು ಎಂದು ಎಲ್ಲಿಯೂ ಹೇಳಿರಲಿಲ್ಲ. ಇದಕ್ಕೆ ಅಧಿಕೃತ ಒಪ್ಪಿಗೆಯಿರಲಿಲ್ಲ ಎನ್ನುವುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದಿರುವ ರಾಯ್, ಈ ಮುಖಬೆಲೆಗಳ ನೋಟುಗಳನ್ನು ಬಿಡುಗಡೆಗೊಳಿಸಲು ಸಮ್ಮತಿ ಸಿಕ್ಕಿರಲಿಲ್ಲವಾದರೆ ಅವುಗಳ ಮುಖಬೆಲೆ,ವಿನ್ಯಾಸ,ಮುದ್ರಣ ಮತ್ತು ವಿತರಣೆಗೆ ಒಪ್ಪಿಗೆ ನೀಡಿದ್ದವರು ಯಾರು ಎಂದು ಪ್ರಶ್ನಿಸಿದ್ದಾರೆ.
ಆರ್‌ಬಿಐ ಮಂಡಳಿಯ ಅನುಮತಿಯಿಲ್ಲ, ಬೆಂಬಲಿಸಲು ಯಾವುದೇ ಸರಕಾರಿ ನಿರ್ಣಯವಿಲ್ಲ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಗೊತ್ತಿರುವ ಯಾವುದೇ ದಾಖಲೆಯಿಲ್ಲ ಎಂದಾದರೆ 200 ಮತ್ತು 2000 ರೂ.ನೋಟುಗಳ ಶಾಸನಾತ್ಮಕ ಸಿಂಧುತ್ವ ಮತ್ತು ಅಧಿಕೃತ(ಹಣಕಾಸು) ಸ್ಥಾನಮಾನದ ಬಗ್ಗೆ ದೊಡ್ಡ ಪ್ರರ್ಶನೆ ಏಳುತ್ತದೆ. ಈ ವಿಷಯದ ಬಗ್ಗೆ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ರಾಯ್ ಹೇಳಿದ್ದಾರೆ.
ಆದರೆ ಇಂತಹ ಒಪ್ಪಿಗೆ ನಿಜಕ್ಕೂ ಇತ್ತು ಎಂದಾದರೆ ಆರ್‌ಟಿಐ ಉತ್ತರದೊಂದಿಗೆ ಈ ದಾಖಲೆಗಳನ್ನು ಏಕೆ ಲಭ್ಯವಾಗಿಸಿಲ್ಲ ಎನ್ನುವದನ್ನು ಆರ್‌ಬಿಐ ಮತ್ತು ಸರಕಾರ ವಿವರಿಸಲೇಬೇಕಾಗುತ್ತದೆ.







