ರೊಹಿಂಗ್ಯಾ ಜಮೀನುಗಳ ಭತ್ತ ಕಟಾವು ಮಾಡಲು ಮ್ಯಾನ್ಮಾರ್ ಸರಕಾರ ನಿರ್ಧಾರ
ನಿರಾಶ್ರಿತರ ವಾಪಸಾತಿ ಬಗ್ಗೆ ಹೆಚ್ಚಿನ ಕಳವಳ

ಯಾಂಗನ್ (ಮ್ಯಾನ್ಮಾರ್), ಅ. 28: ಮ್ಯಾನ್ಮಾರ್‌ನ ಹಿಂಸಾಗ್ರಸ್ತ ಉತ್ತರ ರಖೈನ್ ರಾಜ್ಯದ ಪರಿತ್ಯಕ್ತ ಕೃಷಿ ಭೂಮಿಯಲ್ಲಿ ಮ್ಯಾನ್ಮಾರ್ ಸರಕಾರ ಭತ್ತ ಕಟಾವು ಮಾಡಲಿದೆ ಎಂದು ಸರಕಾರಿ ಮಾಧ್ಯಮ ಶನಿವಾರ ವರದಿ ಮಾಡಿದೆ.
ಇದು ಸೇನಾ ದೌರ್ಜನ್ಯಕ್ಕೆ ಬೆದರಿ ಇಲ್ಲಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಆರು ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರ ವಾಪಸಾತಿ ಸಾಧ್ಯತೆ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ.
ಆಗಸ್ಟ್ ಬಳಿಕ, ಗಡಿ ವಲಯವು ಅಲ್ಲಿನ ಮುಸ್ಲಿಮ್ ನಿವಾಸಿಗಳಿಂದ ಬಹುತೇಕ ಮುಕ್ತವಾಗಿದೆ. ಇಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ಬರ್ಬರ ಕಾರ್ಯಾಚರಣೆ ನಡೆಸಿತ್ತು. ಸೈನಿಕರು ಎದುರಿಗೆ ಸಿಕ್ಕ ಪುರುಷರನ್ನು ಕೊಂದು ಬಿಸಾಡಿದ್ದಾರೆ ಹಾಗೂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯಾ ಮುಸ್ಲಿಮರು ಆರೋಪಿಸಿದ್ದಾರೆ.
ಮ್ಯಾನ್ಮಾರ್ ಸೇನೆಯು ರಖೈನ್ ರಾಜ್ಯದಲ್ಲಿ ಜನಾಂಗೀಯ ನಿರ್ಮೂಲನೆಯಲ್ಲಿ ತೊಡಗಿದೆ ಎಂದು ವಿಶ್ವಸಂಸ್ಥೆಯ ಆರೋಪಿಸಿರುವುದನ್ನು ಸ್ಮರಿಸಬಹುದಾಗಿದೆ.
ಜಾಗತಿಕ ಒತ್ತಡಕ್ಕೆ ಮಣಿದ ಮ್ಯಾನ್ಮಾರ್, ರಖೈನ್‌ನಲ್ಲಿನ ತಮ್ಮ ವಾಸ್ತವ್ಯವನ್ನು ಸಾಬೀತುಪಡಿಸಬಲ್ಲ ನಿರಾಶ್ರಿತರನ್ನು ವಾಪಸ್ ಕರೆಸಿಕೊಳ್ಳಲು ಒಪ್ಪಿದೆ.
ಆದರೆ, ನಿರಾಶ್ರಿತರನ್ನು ವಾಪಸ್ ಕರೆಸಿಕೊಳ್ಳುವ ಯೋಜನೆಯ ವಿವರಗಳು ಅಸ್ಪಷ್ಟವಾಗಿವೆ.
ಹಿಂಸಾಚಾರದಿಂದ ಅತಿ ಹೆಚ್ಚಿನ ಹಾನಿಗೆ ಒಳಗಾಗಿರುವ ರೊಹಿಂಗ್ಯಾ ಬಾಹುಳ್ಯದ ಪ್ರದೇಶ ಮಾಂಗ್‌ಡಾವ್‌ನಲ್ಲಿ 71,000 ಎಕರೆ ಪ್ರದೇಶದಲ್ಲಿ ಭತ್ತ ಕಟಾವು ಮಾಡಲು ಸರಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಸರಕಾರಿ ಮಾಧ್ಯಮ ಶನಿವಾರ ವರದಿ ಮಾಡಿದೆ.
ಕೃಷಿ ಕೆಲಸಕ್ಕಾಗಿ ಕಾರ್ಮಿಕರನ್ನು ದೇಶದ ಇತರ ಭಾಗಗಳಿಂದ ಕರೆದುಕೊಂಡು ಬರಲಾಗುವುದು ಎಂದು ‘ಗ್ಲೋಬಲ್ ನ್ಯೂ ಲೈಟ್ ಆಫ್ ಮ್ಯಾನ್ಮಾರ್’ನ ವರದಿಯೊಂದು ತಿಳಿಸಿದೆ.
‘‘ಸದ್ಯಕ್ಕೆ, ಭತ್ತ ಕಟಾವು ಮಾಡಿ, ಒಣಗಿಸಿ, ದಾಸ್ತಾನಿಡುವ ಕೆಲಸವನ್ನು ನಮಗೆ ಒದಗಿಸಲಾಗಿದೆ’’ ಎಂದು ಮಾಂಗ್‌ಡಾವ್ ಪಟ್ಟಣದ ಕೃಷಿ ಇಲಾಖೆಯ ಮುಖ್ಯಸ್ಥ ತೆನ್ ವಾಯ್ ತಿಳಿಸಿದರು.
ರೊಹಿಂಗ್ಯಾ ಶಿಬಿರಗಳಲ್ಲಿ ಜನನ ನಿಯಂತ್ರಣ ಜಾರಿಗೆ ಮುಂದಾದ ಬಾಂಗ್ಲಾ
ತನ್ನಲ್ಲಿರುವ ಕಿಕ್ಕಿರಿದ ರೊಹಿಂಗ್ಯಾ ನಿರಾಶ್ರಿತ ಶಿಬಿರಗಳಲ್ಲಿ ಸ್ವಯಂಪ್ರೇರಿತ ಜನನ ನಿಯಂತ್ರಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಬಾಂಗ್ಲಾದೇಶ ಚಿಂತಿಸುತ್ತಿದೆ.
ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರರು ಸೇನೆ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಬಳಿಕ, ಸೇನೆ ನಡೆಸಿದ ಪ್ರತೀಕಾರಾತ್ಮಕ ಹಿಂಸೆಗೆ ಬೆದರಿ ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ 6 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
ಶಿಬಿರಗಳಲ್ಲಿ ಸ್ಥಳಾವಕಾಶಕ್ಕಾಗಿ ನಿರಾಶ್ರಿತರು ಪರದಾಡುತ್ತಿದ್ದಾರೆ. ಅವರಿಗೆ ಸೀಮಿತ ಆಹಾರ, ಶೌಚ ಮತ್ತು ಆರೋಗ್ಯ ಸೌಲಭ್ಯಗಳು ಲಭಿಸುತ್ತಿವೆ.
ಸರಿಯಾದ ಕುಟುಂಬ ಯೋಜನೆಯಿಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಭೀತಿಯನ್ನು ಸ್ಥಳೀಯ ಅಧಿಕಾರಿಗಳು ಹೊಂದಿದ್ದಾರೆ.







