ಚುನಾವಣೆಯಲ್ಲಿ ಬಿಜೆಪಿಗೆ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ: ಗೋಣಿ ಮಾಲತೇಶ್

ಶಿಕಾರಿಪುರ, ಅ.28: ರಾಜ್ಯದಲ್ಲಿ ಕೋಮು ಸೌಹಾರ್ದತೆಯಿಂದ ಬದುಕುತ್ತಿರುವ ಹಿಂದೂ-ಮುಸ್ಲಿಮರ ಮಧ್ಯೆ ಕೋಮು ದ್ವೇಷದ ಬೆಂಕಿ ಹಚ್ಚಿ ಅಧಿಕಾರ ಗಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದ್ದು, ಬಿಜೆಪಿಗೆ ನಾಡಿನ ಜನತೆ ಸೂಕ್ತ ಉತ್ತರವನ್ನು ನೀಡಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಎಚ್ಚರಿಸಿದ್ದಾರೆ.
ಶನಿವಾರ ಪಟ್ಟಣದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಟಿಪ್ಪು ಜಯಂತಿ ವಿರುದ್ಧ ಅನಗತ್ಯ ವಿವಾದ ಕಿಡಿಯನ್ನು ಹಚ್ಚುತ್ತಿರುವ ಬಿಜೆಪಿಯ ಕೇಂದ್ರ ಸಚಿವ ಹಾಗೂ ಶಾಸಕರನ್ನು ವಜಾಗೊಳಿಸುವಂತೆ ಒತ್ತಾಯಿಸಿ ತಾಲೂಕು ಕಚೇರಿ ಮುಂಭಾಗ ನಡೆದ ಧರಣಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೋಮುವಾದದ ಬೆಂಕಿಯನ್ನು ಹಚ್ಚಿ ಅಶಾಂತಿ ಗಲಭೆಯ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಏಕೈಕ ಉದ್ದೇಶದಿಂದ ಟಿಪ್ಪು ಜಯಂತಿ ಬಗ್ಗೆ ಇಲ್ಲಸಲ್ಲದ ಹೇಳಿಕೆಯನ್ನು ಬಿಜೆಪಿಯ ಮುಖಂಡರು, ಜವಾಬ್ದಾರಿಯುತ ಕೇಂದ್ರ ಸಚಿವರು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್ ಉಳ್ಳಿ ಮಾತನಾಡಿ, ಶೃಂಗೇರಿ ಮಠದ ವಿರುದ್ಧ ಮರಾಠರು ದಾಳಿ ನಡೆಸಿದಾಗ ಮಠದ ಪರವಾಗಿ ಹೋರಾಡಿದ ಟಿಪ್ಪು ಅಪಾರ ಆಸ್ತಿ ಸಂಪತ್ತನ್ನು ಉಳಿಸಿಕೊಟ್ಟು ಹಿಂದೂಗಳ ರಕ್ಷಿಸಿದ್ದಾನೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಶಂಸೆ ವ್ಯಕ್ತಪಡಿಸಿದ್ದು, ಬ್ರಿಟೀಷರ ಆಕ್ರಮಣದ ವಿರುದ್ಧ ಹಲವು ಬಾರಿ ಹೋರಾಡಿದ ಟಿಪ್ಪು ಬಗ್ಗೆ ಬಿಜೆಪಿ ಕ್ಷುಲ್ಲಕ ರಾಜಕಾರಣವನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ಜಿ.ಪಂ ಸದಸ್ಯ ನರಸಿಂಗನಾಯ್ಕ, ಪುರಸಭಾ ಸದಸ್ಯ ಮಹೇಶ್ ಹುಲ್ಮಾರ್, ಪಾಲಾಕ್ಷಪ್ಪ ಬಡಗಿ, ಎಪಿಎಂಸಿ ಸದಸ್ಯ ನಗರದ ರವಿಕಿರಣ್, ಮುಖಂಡ ಹಳ್ಳೂರು ಪರಮೇಶ್ವರಪ್ಪ, ಸ.ನ ಮಂಜಪ್ಪ, ಭಂಡಾರಿ ಮಾಲತೇಶ, ವಿಜಯಕುಮಾರ್, ಇದ್ರೂಸ್ ಸಾಬ್, ಸುರೇಶ್ ಮತ್ತಿತರರು ಹಾಜರಿದ್ದರು.







