ವಿಮಾನ ನಿಲ್ದಾಣ ಪ್ರವೇಶಿಸಲು ‘ಎಂ ಆಧಾರ್’ ಸಾಕು

ಹೊಸದಿಲ್ಲಿ, ಅ. 28: ವಿಮಾನ ನಿಲ್ದಾಣ ಪ್ರವೇಶಿಸಲು ಎಂ ಆಧಾರ್ (ಮೊಬೈಲ್ ಆಧಾರ್) ಸಾಕು. ಹೆತ್ತವರ ಜೊತೆಗೆ ಆಗಮಿಸುವ ಮಕ್ಕಳಿಗೆ ಗುರುತಿನ ದಾಖಲೆಗಳು ಅಗತ್ಯ ಇಲ್ಲ ಎಂದು ವೈಮಾನಿಕ ಭದ್ರತಾ ಸಂಸ್ಥೆಯ ಸುತ್ತೋಲೆ ತಿಳಿಸಿದೆ.
ಪ್ರಯಾಣಿಕರು ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶಿಸುವಾಗ ಪಾಸ್‌ಪೋರ್ಟ್, ಮತ ಗುರುತು ಚೀಟಿ, ಆಧಾರ್ ಅಥವಾ ಎಂಆಧಾರ್, ಪಾನ್‌ಕಾರ್ಡ್, ಚಾಲನಾ ಪರವಾನಿಗೆ ಸೇರಿದಂತೆ ನಾಗರಿಕ ವಿಮಾನ ಭದ್ರತಾ ಬ್ಯೂರೊ ಪಟ್ಟಿಮಾಡಿದ 10 ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿದರೆ ಸಾಕು ಎಂದು ಬಿಸಿಎಎಸ್ ತನ್ನ ಸುತ್ತೋಲೆಯಲ್ಲಿ ಹೇಳಿದೆ.
ಆತ/ಆಕೆಗೆ ನೀಡಲಾದ ಟಿಕೆಟ್‌ನಲ್ಲೇ ಪ್ರಯಾಣಿಸುತ್ತಿದ್ದಾನೆ/ಳೆ. ಎಂಬುದನ್ನು ಖಾತರಿಪಡಿಸಲು ಹಾಗೂ ಭದ್ರತಾ ಸಿಬ್ಬಂದಿಯೊಂದಿಗಿನ ವಿವಾದ, ವಾಗ್ವಾದ ತಪ್ಪಿಸಲು ಈ ಮೇಲಿನ ಅಸಲಿ ಫೋಟೊ ಗುರುತು ದಾಖಲೆಯನ್ನು ಕೊಂಡೊಯ್ಯಬಹುದು ಎಂದು ಅಕ್ಟೋಬರ್ 26ರಂದು ಹೊರಡಿಸಲಾದ ಬಿಸಿಎಎಸ್‌ನ ಸುತ್ತೋಲೆ ತಿಳಿಸಿದೆ.
ರಾಷ್ಟ್ರೀಯ ಬ್ಯಾಂಕ್ ನೀಡಿದ ಪಾಸ್ ಪುಸ್ತಕ, ಪಿಂಚಣಿ ಕಾರ್ಡ್, ಅಂಗವಿಕಲತೆಯ ಫೋಟೊ ಗುರುತು ಪತ್ರ, ಕೇಂದ್ರ/ರಾಜ್ಯ ಸರಕಾರದ, ಸಾರ್ವಜನಿಕ ರಂಗದ ಸಂಸ್ಥೆ, ಸ್ಥಳೀಯಾಡಳಿತ ಸಂಸ್ಥೆ, ಖಾಸಗಿ ಲಿಮಿಟೆಡ್ ಕಂಪೆನಿಯ ಸೇವಾ ಫೋಟೊ ಗುರುತು ಪತ್ರ ಕೂಡ ಸ್ವೀಕಾರಾರ್ಹ.
ಭಿನ್ನ ಸಾಮರ್ಥ್ಯರು ಭಿನ್ನಸಾಮರ್ಥ್ಯದ ಫೋಟೊ ಗುರುತು ಪತ್ರ ಅಥವಾ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬಹುದು. ವಿದ್ಯಾರ್ಥಿಗಳು ಸರಕಾರ ಸಂಸ್ಥೆ ನೀಡಿದ ಫೋಟೊ ಗುರುತು ಪತ್ರವನ್ನು ಕೂಡ ನೀಡುವ ಅವಕಾಶ ಇದೆ.







