ರೈತರ ಹೋರಾಟಗಳು ಯಶಸ್ವಿಯಾಗಲು ಪತ್ರಿಕೆಗಳ ಪಾತ್ರ ಮಹತ್ತರ: ತೇಜಸ್ವಿ ಪಟೇಲ್

ದಾವಣಗೆರೆ, ಅ.28: ಪತ್ರಕರ್ತರು ನಿರ್ಭಯ ಮನಸ್ಸು ಹೊಂದಿ, ಪೂರ್ವಾಗ್ರಹ ಪೀಡಿತರಾಗದೇ ವಸ್ತುನಿಷ್ಠ ವರದಿ ನೀಡಬೇಕು ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಕಿವಿಮಾತು ಹೇಳಿದ್ದಾರೆ.
ನಗರದ ರೋಟರಿ ಬಾಲಭವನದಲ್ಲಿ ಶನಿವಾರ ರಾಜ್ಯ ಪತ್ರಕರ್ತರ ಸಂಘದ ವಾರ್ಷಿಕೋತ್ಸವ ಹಾಗೂ ಯುವ ಪತ್ರಕರ್ತರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಗಳನ್ನು ಗಮನ ಸೆಳೆಯುವ ಮತ್ತು ಎಚ್ಚರಿಸುವಂತಹ ಕೆಲಸವನ್ನು ಮಾಧ್ಯಮಗಳು ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಿಂದ ವಸ್ತುನಿಷ್ಠ ವರದಿಗಳನ್ನು ಬಿತ್ತರಿಸುವಂತಹ ಕೆಲಸ ಆಗುತ್ತಿಲ್ಲ. ಪತ್ರಕರ್ತರಿಗೆ ಸಂಪೂರ್ಣವಾಗಿ ಸ್ವಾತಂತ್ರ್ಯವನ್ನು ನೀಡಿದಾಗ ವಸ್ತುನಿಷ್ಠ ಬರವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ರೈತರ ಪರ ಹೋರಾಟಗಳು ಯಶಸ್ವಿಯಾಗಬೇಕಾದರೆ ಪತ್ರಿಕೆಗಳ ಪಾತ್ರ ಬಹಳ ಮಹತ್ತರವಾಗಿದೆ. ಜನಪರ ಮನೋಭಾವನೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ವರದಿ ಬಿತ್ತರವಾದರೆ ಪ್ರಜಾಪ್ರಭುತ್ವಕ್ಕೆ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರ ಬಸವರಾಜ್ ಐರಣಿ, ದಾವಣಗೆರೆ ವಿಶ್ವವಿದ್ಯಾನಿಲಯ ಉಪನ್ಯಾಸಕ ಬ್ರಹ್ಮದೇವ ಹದಳಗಿ, ತುರುವನೂರು ಮಹ್ಮಮದ್ ಶರೀಫ್, ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎಚ್.ಟಿ. ಶಂಕರಮೂರ್ತಿ, ಇಂದಿರಾ ಕೃಷ್ಣಪ್ಪ, ಮಲ್ಲಿಕಾರ್ಜುನ ರೆಡ್ಡಿ, ರುದ್ರಪ್ಪ ಮತ್ತಿತರರಿದ್ದರು.







