ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ದಾರಿಯಲ್ಲಿ ಬದುಕು ರೂಪಿಸಿಕೊಳ್ಳಬೇಕು: ಆತ್ಮಜ್ಞಾನಂದಜೀ ಮಹಾರಾಜ್

ದಾವಣಗೆರೆ, ಅ.28: ವಿದೇಶದಿಂದ ಭಾರತಕ್ಕೆ ಬಂದು ಭಾರತಕ್ಕಾಗಿ ದುಡಿದ ಏಕೈಕ ಮಹಿಳೆ ಸೋದರಿ ನಿವೇದಿತಾ ಎಂದು ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಆತ್ಮಜ್ಞಾನಂದಜೀ ಮಹಾರಾಜ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀಗುರು ಬಕ್ಕೇಶ್ವರ ಕಲ್ಯಾಣ ಮಂಟಪದಲ್ಲಿ ಸೋದರಿ ನಿವೇದಿತಾರ 150ನೆ ಜನ್ಮ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೋದರಿ ನಿವೇದಿತಾ ವಿದೇಶದಿಂದ ಭಾರತಕ್ಕೆ ಬಂದು ಭಾರತದ ನೆಲ, ಜಲ, ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡು ಅಪ್ಪಟ ಭಾರತೀಯರಿಗಾಗಿ ದೇಶಸೇವೆ ಮಾಡಿದವರು. ಶಾಲೆಯನ್ನೇ ಕಾಣದ ಅದೆಷ್ಟೋ ಸ್ತ್ರೀ ಸಂಕುಲಕ್ಕೆ ಶಾಲೆ ಆರಂಭಿಸುವ ಮೂಲಕ ಅಕ್ಷರಜ್ಞಾನ ಬಿತ್ತಿದ್ದರು. ಎಲ್ಲರಿಗೂ ಸ್ವತಂತ್ರವಾಗಿ ಆಲೋಚಿಸುವ ಶಕ್ತಿ ತುಂಬಿದವರು ನಿವೇದಿತಾ ಎಂದ ಅವರು, ಭಾರತೀಯರಲ್ಲಿ ಸ್ವಾಭಿಮಾನ, ಆತ್ಮಸ್ಸೈರ್ಯ, ಭಾಷಾಭಿಮಾನ ಮೂಡಿಸುವ ಜೊತೆಗೆ ತನ್ನನ್ನು ತಾನು ಗುರುತಿಸಿಕೊಳ್ಳುವ, ಅಸ್ತಿತ್ವ ಕಂಡುಕೊಳ್ಳುವ ಬಗೆ ಮೂಡಿಸಿದರು ಎಂದು ಹೇಳಿದರು.
ವಿದ್ಯಾರ್ಥಿಗಳು ಆದರ್ಶನೀಯ ವ್ಯಕ್ತಿಗಳು ಹಾಕಿಕೊಟ್ಟ ದಾರಿಯಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂದು ಇದೇ ವೇಳೆ ಕರೆ ನೀಡಿದರು.
ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶಾದದೇಶಾನಂದರು ಮಾತನಾಡಿ, ಆತ್ಮವಿಶ್ವಾಸ, ತಾಳ್ಮೆ, ಸಹನೆ, ನಿಸ್ವಾರ್ಥತೆ, ಛಲವಿಲ್ಲದಿದ್ದರೆ ಎಂದಿಗೂ ಸಾಧನೆ ಅಸಾಧ್ಯ. ಇಂದಿನ ಮಕ್ಕಳಲ್ಲಿ ಆತ್ಮವಿಶ್ವಾಸವೇ ಇಲ್ಲದಂತಾಗಿದೆ. ತಮ್ಮಲ್ಲಿರುವ ಶಕ್ತಿ, ಪ್ರತಿಭೆ ಬಗ್ಗೆ ತಮಗೆ ಗೊತ್ತಿರುವುದಿಲ್ಲ. ಇಂತಹ ಸುಪ್ತ ಪ್ರತಿಭೆಯನ್ನು ಗುರುತಿಸಿ, ಹೊರಗೆಡವಿ ಭಾರತೀಯರಿಗೆ ಹೊಸ ಜೀವನ ಕಲ್ಪಿಸಿಕೊಟ್ಟವರು ನಿವೇದಿತಾ. 40ನೆ ವರ್ಷಕ್ಕೆ ಭಾರತಕ್ಕೆ ಬಂದು ಕೇವಲ 8 ವರ್ಷಗಳಲ್ಲಿ ಆಕೆ ಮಾಡಿದ ಸೇವೆ ಅಪಾರ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಲಸೂರಿನ ರಾಮಕೃಷ್ಣ ಮಠದ ತ್ಯಾಗೀಶ್ವರಾನಂದಜೀ ಪ್ರಾಸ್ತಾವಿಕ ಮಾತನಾಡಿದರು. ದಾವಣಗೆರೆ ಆಶ್ರಮದ ಅಧ್ಯಕ್ಷ ಆರ್.ಆರ್. ರಮೇಶ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಇದಕ್ಕೂ ಮೊದಲು ಸೋದರಿ ನಿವೇದಿತಾರ 150ನೆ ಜನ್ಮದಿನದಂಗವಾಗಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯು ವಿದ್ಯಾನಗರ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ದುರ್ಗಾಂಬಿಕಾ ದೇವಸ್ಥಾನ, ಜಯದೇವ ವೃತ್ತದಿಂದ ಏಕಕಾಲದಲ್ಲಿ ಆರಂಭಗೊಂಡು ಮೆರವಣಿಗೆ ಮೂಲಕ ಬಕ್ಕೇಶ್ವರ ಕಲ್ಯಾಣ ಮಂಟಪಕ್ಕೆ ತಲುಪಿತು.
ಹೇಮಂತಕುಮಾರ್, ಪಲ್ಲಾಗಟ್ಟೆ ರಾಜಶೇಖರ್, ಕು. ಪೂಜಾ ಹಾಗೂ ಕೀರ್ತನಾ ಮತ್ತಿತರರಿದ್ದರು. ಆರ್. ವಿರೇಶ್ ಸ್ವಾಗತಿಸಿದರು.







