ಸುಪ್ರೀಂ ಕೋರ್ಟ್ ಆದೇಶ ಪಾಲನೆ: ಜಿಲ್ಲಾಧಿಕಾರಿ ಶ್ರೀರಂಗಯ್ಯ
ಮೀಸಲು ಒತ್ತುವರಿ ಅರಣ್ಯ ಸಭೆ

ಚಿಕ್ಕಮಗಳೂರು, ಅ.28: ಮಸಗಲಿ ಮೀಸಲು ಅರಣ್ಯದ ಒತ್ತುವರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಸಗಲಿ ಮೀಸಲು ಅರಣ್ಯದ ಒತ್ತುವರಿದಾರರನ್ನು ತೆರವು ಗೊಳಿಸುವ ಸಂಬಂಧ ಒತ್ತುವರಿದಾರರಿಗೆ ಪುನರ್ವಸತಿ ಕಲ್ಪಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಂದರ್ಭ ಮಾತನಾಡಿದ ಗ್ರಾಮದ ಮುಖಂಡರು, ತಮಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸುವ ಬದಲು ಇಲ್ಲಿಯೇ ಇರಲು ಅವಕಾಶ ನೀಡಬೇಕು. ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಬೇಕು. ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸಿದರೆ ತುಂಬಾ ಅನನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಅರಣ್ಯಾಧಿಕಾರಿ ಚಂದ್ರಣ್ಣ ಮಾತನಾಡಿ, ಸರಕಾರದ ನಿರ್ದೇಶನ ಬರುವವರೆಗೆ ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಗ್ರಾಮಸ್ಥರಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಶಾಸಕ ಬಿ.ಬಿ. ನಿಂಗಯ್ಯ, ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪವಿಭಾಗಾಧಿಕಾರಿ ಸಂಗಪ್ಪ, ತಹಶೀಲ್ದಾರ್ ಶಿವಣ್ಣ ಮತ್ತಿತರರಿದ್ದರು.





