ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ: ಪ್ರತಾಪ್ ಸಿಂಹ

ಮಡಿಕೇರಿ, ಅ.28 : ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದೆ. ಒಂದೊಂದು ಪ್ರಾಂತ್ಯಕ್ಕೆ ಒಂದು ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ವಿಭಿನ್ನವಾಗಿವೆ. ಕೊಡವ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಉಳಿಸಿ, ಬೆಳೆಸುವ ಅಗತ್ಯವಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದ ಕೊಡವ ಸಮಾಜಗಳ ಒಕ್ಕೂಟ ವತಿಯಿಂದ ಶನಿವಾರ ನಡೆದ 6ನೆ ವರ್ಷದ ‘ಕೊಡವ ನಮ್ಮೆ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪಅವರು ಮಾತನಾಡಿ, ಕೊಡವ ಸಂಸ್ಕೃತಿಯನ್ನು ಹಿಂದಿನಿಂದ ಉಳಿಸಿ, ಬೆಳೆಸಿಕೊಂಡು ಬರಲಾಗುತ್ತಿದೆ. ಆ ನಿಟ್ಟಿನಲ್ಲಿ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ 6 ವರ್ಷಗಳಿಂದ ‘ಕೊಡವ ನಮ್ಮೆ’ ಹೆಸರಿನಲ್ಲಿ ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬರಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬೊಳ್ಳಜ್ಜೀರ ಅಯ್ಯಪ್ಪ, ಬಾಳುಗೋಡು ಕೊಡವ ಸಮಾಜದ ಒಕ್ಕೂಟದ ಅಧ್ಯಕ್ಷ ಮಲ್ಲೇಂಗಡ ದಾದ ಬೆಳ್ಯಪ್ಪ, ಒಕ್ಕೂಟದ ನಾಪಂಡ ರವಿಕಾಳಪ್ಪ, ಅಭಿಮನ್ಯು ಕುಮಾರ್, ಬಲ್ಯಮಂಡ ನಾಣಯ್ಯ, ವಾಟೇರಿರ ಶಂಕರಿ ಪೂವಯ್ಯ ಉಪಸ್ಥಿತರಿದ್ದರು.





