ಸೋಲಿನೊಂದಿಗೆ ಟೆನಿಸ್‌ಗೆ ವಿದಾಯ ಹೇಳಿದ ಹಿಂಗಿಸ್

ಸಿಂಗಾಪುರ, ಅ.28:ಡಬ್ಲುಟಿಎ ಫೈನಲ್ಸ್ ಟೂರ್ನಿಯ ಡಬಲ್ಸ್ ಸೆಮಿ ಫೈನಲ್‌ನಲ್ಲಿ ಸೋಲುವ ಮೂಲಕ ಸ್ವಿಸ್ ಸೂಪರ್ ಸ್ಟಾರ್ ಮಾರ್ಟಿನಾ ಹಿಂಗಿಸ್ ಟೆನಿಸ್ ಲೋಕಕ್ಕೆ ವಿದಾಯ ಹೇಳಿದ್ದಾರೆ.
ಶನಿವಾರ ಇಲ್ಲಿ ನಡೆದ ಸೆಮಿಫೈನಲ್‌ನಲ್ಲಿ ತೈವಾನ್‌ನ ಚಾನ್ ಯಂಗ್-ಜಾನ್‌ರೊಂದಿಗೆ ವಿದಾಯದ ಪಂದ್ಯವನ್ನಾಡಿದ ಹಿಂಗಿಸ್ ಅವರು ಟೈಮಿಯಾ ಬಾಬೊಸ್ ಹಾಗೂ ಆ್ಯಂಡ್ರಿಯ ಹಿಲಾವಾಕೊವಾ ವಿರುದ್ಧ 6-4, 7-6(5) ಸೆಟ್‌ಗಳಿಂದ ಸೋತಿದ್ದಾರೆ.
ಹಿಂಗಿಸ್ ಗುರುವಾರ ಟೆನಿಸ್‌ಗೆ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. ಹಿಂಗಿಸ್ ವೃತ್ತಿಜೀವನದಲ್ಲಿ ಮೂರನೆ ಬಾರಿ ನಿವೃತ್ತಿಯಾಗುತ್ತಿದ್ದಾರೆ. ಈ ಹಿಂದೆ ಅವರು 2003 ಹಾಗೂ 2007ರಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ, 2013ರಲ್ಲಿ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿದ್ದರು.
ಹಿಂಗಿಸ್ ವೃತ್ತಿಜೀವನದಲ್ಲಿ 5 ಸಿಂಗಲ್ಸ್ ಹಾಗೂ 20 ಡಬಲ್ಸ್ ಪ್ರಶಸ್ತಿ ಸಹಿತ ಒಟ್ಟು 25 ಗ್ರಾನ್‌ಸ್ಲಾಮ್ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 1996ರಲ್ಲಿ ತನ್ನ 15ನೆ ವಯಸ್ಸಿನಲ್ಲಿ ಹೆಲೆನಾ ಸ್ಲೋವಾಕಿಯ ಜೊತೆಗೂಡಿ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು. ಈಮೂಲಕ ಕಿರಿಯ ವಯಸ್ಸಿಯಲ್ಲೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದ್ದರು.
ಅನಾ ಕೌರ್ನಿಕೊವಾ ಹಾಗೂ ಸಾನಿಯಾ ಮಿರ್ಝಾ ವಿರುದ್ಧ ಗೆಲುವು ಸಾಧಿಸಿದ್ದ ಅಗ್ರ ಶ್ರೇಯಾಂಕದ ಹಿಂಗಿಸ್ ನಾಲ್ಕನೆ ಡಬ್ಲುಟಿಎ ಫೈನಲ್ಸ್ ಡಬಲ್ಸ್ ಪ್ರಶಸ್ತಿಯೊಂದಿಗೆ ವಿದಾಯ ಹೇಳುವ ವಿಶ್ವಾಸ ಮೂಡಿಸಿದ್ದರು. ಆದರೆ, ಸಿಂಗಾಪುರ ಸ್ಟೇಡಿಯಂನಲ್ಲಿ ಶನಿವಾರ ನಡೆದ ಸೆಮಿಫೈನಲ್ಸ್‌ನಲ್ಲಿ ಹಂಗೇರಿಯದ ಬಾಬೊಸ್ ಹಾಗೂ ಝೆಕ್‌ನ ಹಿಲಾವಾಕೋವಾ ಸವಾಲು ಮೆಟ್ಟಿ ನಿಲ್ಲಲು ವಿಫಲರಾದರು.
ಸಿಂಗಾಪುರ ಓಪನ್‌ನ ಸೆಮಿಫೈನಲ್‌ನಲ್ಲಿ ಸೋತ ಹೊರತಾಗಿಯೂ ಹಿಂಗಿಸ್ ಮಹಿಳೆಯರ ಡಬಲ್ಸ್ ನಲ್ಲಿ ನಂ.1 ರ್ಯಾಂಕಿಂಗ್‌ನೊಂದಿಗೆ ವರ್ಷವನ್ನು ಕೊನೆಗೊಳಿಸಲಿದ್ದಾರೆ ಎಂದು ಡಬ್ಲುಟಿಎ ಶುಕ್ರವಾರ ದೃಢಪಡಿಸಿದೆ. ಹಿಂಗಿಸ್-ಚಾನ್ ಜೋಡಿ ಈ ವರ್ಷ ಯುಎಸ್ ಓಪನ್ ಸಹಿತ ಒಟ್ಟು 9 ಪ್ರಶಸ್ತಿಗಳನ್ನು ಜಯಿಸಿದೆ.







