ಬಗರ್ ಹುಕುಂ ಹೆಸರಿನಲ್ಲಿ ಪಾದಯಾತ್ರೆ ನಾಟಕ: ಕುಮಾರ್ ಬಂಗಾರಪ್ಪ ಲೇವಡಿ

ಸೊರಬ, ಅ.28: ಕಳೆದ ಚುನಾವಣೆ ಸಂದರ್ಭದಲ್ಲಿ ಬಗರ್‌ಹುಕುಂ ಹೆಸರಿನಲ್ಲಿ ಪಾದಯಾತ್ರೆಯ ನಾಟಕವಾಡಿ ರಾಜಕೀಯ ಲಾಭ ಪಡೆದ ಮಧುಬಂಗಾರಪ್ಪಶಾಸಕರಾಗಿ ತಾಳಗೊಪ್ಪ, ಕೆರೆಹಳ್ಳಿಯ 23 ರೈತರಿಗೆ ಹಕ್ಕುಪತ್ರ ಸಿಗದಂತೆ ನೋಡಿಕೊಂಡಿರುವುದೇ ಅವರ ಸಾಧನೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಲೇವಡಿ ಮಾಡಿದ್ದಾರೆ.
ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪಾದಯಾತ್ರೆ ಮೂಲಕ ತಾಲೂಕಿನ ರೈತರನ್ನು ದಿಕ್ಕು ತಪ್ಪಿಸಿದ್ದ ಅವರು ಪುನಃ ಚುನಾವಣೆ ಸಮೀಪಿಸುತ್ತಿರುವಂತೆ ನೀರಾವರಿ ಹೆಸರಿನಲ್ಲಿ ಮತ್ತೆ ಪಾದಯಾತ್ರೆಗೆ ಮುಂದಾಗಿರುವುದು ರಾಜಕೀಯ ನಾಟಕವಾಗಿದೆ ಎಂದರು.
ನೀರಾವರಿ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆಗೊಳಿಸುವಲ್ಲಿ ಇವರ ಸಾಧೆನೆಯೇನೆಂಬುದು ಜನರಿಗೆ ಮನವರಿಕೆ ಮಾಡಲಿ. ರಾಜಕೀಯ ಸ್ಥಾನಮಾನಕ್ಕಾಗಿ ಜನರ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳಲು ಪಾದಯಾತ್ರೆಯ ನಾಟಕ ಮಾಡುತ್ತಿದ್ದಾರೆ ಎಂದು ದೂರಿದರು.
ಎಷ್ಟು ಜನ ಅರ್ಹ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಎ.ಎಲ್.ಅರವಿಂದ್, ಮುಖಂಡರಾದ ಪಾಣಿ ರಾಜಪ್ಪ, ಯೋಗೇಶ್ ಓಟೂರು, ಗಜಾನನರಾವ್‌ಉಳವಿ, ನಿರಂಜನ ಕುಪ್ಪಗಡ್ಡೆ, ಶಿವಯೋಗಿ, ತಬಲಿ ಬಂಗಾರಪ್ಪ, ನಿಂಗಪ್ಪ ಮತ್ತಿತರರಿದ್ದರು.







