ಪ್ರಧಾನಿ ಸ್ವಾಗತಕ್ಕೆ ಧರ್ಮಸ್ಥಳ ಸಜ್ಜು

ಬೆಳ್ತಂಗಡಿ, ಅ.28: ಪ್ರಥಮ ಬಾರಿಗೆ ಪ್ರಧಾನಿಯೊಬ್ಬರು ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸಲು ಧರ್ಮಸ್ಥಳ ಹಾಗೂ ಉಜಿರೆ ಸಜ್ಜುಗೊಂಡಿದೆ. ಅ.29ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಧರ್ಮಸ್ಥಳದ ನಿಯಂತ್ರಣವನ್ನು ಸಂಪೂರ್ಣವಾಗಿ ಪೊಲೀಸರು ವಹಿಸಿಕೊಂಡಿದ್ದಾರೆ.
ಪ್ರಧಾನಿ ಭಾಗವಹಿಸುವ ಕಾರ್ಯಕ್ರಮಕ್ಕಾಗಿ ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎಲ್ಲಾ ಸಿದ್ಧತೆಗಳನ್ನೂ ಪೂರ್ಣಗೊಳಿಸಲಾಗಿದೆ. ಧರ್ಮಸ್ಥಳದಲ್ಲಿ ಹೆಲಿಪ್ಯಾಡ್ ಅನ್ನು ಸಜ್ಜುಗೊಳಿಸಲಾಗಿದ್ದು, ಅದರ ನಿಯಂತ್ರಣವನ್ನು ಪೊಲೀಸರು ವಹಿಸಿಕೊಂಡಿದ್ದಾರೆ.
ಪ್ರಧಾನ ಮಂತ್ರಿಯ ಪ್ರಯಾಣಕ್ಕಾಗಿ ಈಗಾಗಲೇ ನಾಲ್ಕು ಅತ್ಯಾಧುನಿಕ ಕಾರುಗಳನ್ನು ಧರ್ಮಸ್ಥಳಕ್ಕೆ ತರಲಾಗಿದೆ. ಪ್ರಧಾನಿಯವರನ್ನು ಸ್ವಾಗತಿಸುವ ಫ್ಲೆಕ್ಸ್‌ಗಳು ಎಲ್ಲಡೆ ರಾರಾಜಿಸುತ್ತಿದೆ.
ಎಸ್‌ಪಿಜಿಯ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ.
ಸಮಾರಂಭದಲ್ಲಿ ಸುಮಾರು ಎಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಜಮಾಯಿಸುವ ನಿರೀಕ್ಷೆಯಿದ್ದು, ಇಡೀ ಕ್ರೀಡಾಂಗಣದಲ್ಲಿ ಸುಮಾರು 60 ಸಾವಿರ ಕುರ್ಚಿಗಳನ್ನು ಹಾಕಲಾಗಿದೆ.
ಹನ್ನೆರಡು ಬ್ಲಾಕ್‌ಗಳನ್ನು ಮಾಡಲಾಗಿದ್ದು, ಪ್ರತಿ ಬ್ಲಾಕ್‌ಗಳಲ್ಲೂ ತಲಾ ಐದು ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. ಕ್ರೀಡಾಂಗಣದ ಪ್ರವೇಶಕ್ಕೆ ನೂಕು ನುಗ್ಗಲು ಉಂಟಾಗದಿರಲು 40 ಕಡೆಗಳಲ್ಲಿ ತಪಾಸಣಾ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಥಳದಲ್ಲಿ 60 ಅಧಿಕಾರಿಗಳ ಸಹಿತ ಎಸ್‌ಪಿಜಿ ತಂಡ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಪೊಲೀಸ್ ಪಡೆಯ ಸುಮಾರು 2,500 ಸಿಬ್ಬಂದಿ ಉಜಿರೆಗೆ ಆಗಮಿಸಿದ್ದಾರೆ. ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, 9 ಎಸ್ಪಿಗಳು, 22 ಡಿವೈಎಸ್ಪಿ, 43 ಇನ್‌ಸ್ಪೆಕ್ಟರ್, 116 ಎಸ್ಸೈ, ಹಾಗೂ ಸಿಬ್ಬಂದಿ ವರ್ಗ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಿದೆ.
ಈಗಾಗಲೇ ಉಜಿರೆ, ಧರ್ಮಸ್ಥಳ ರಸ್ತೆಯ ಎಲ್ಲೆಡೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಮುಖ್ಯರಸ್ತೆಗೆ ಸೇರುವ ಎಲ್ಲ ರಸ್ತೆಗಳಲ್ಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು ನಾಳೆ ಬೆಳಗ್ಗೆ 9 ಗಂಟೆಯ ಬಳಿಕ ಎಲ್ಲ ರಸ್ತೆಗಳನ್ನೂ ಮುಚ್ಚಲಾಗುತ್ತದೆ. ಪ್ರಧಾನಿಯವರು ತೆರಳಿದ ಬಳಿಕವಷ್ಟೇ ಈ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಲಿದೆ. ಧರ್ಮಸ್ಥಳದಿಂದ ಉಜಿರೆಯವರೆಗೆ ರಸ್ತೆಬದಿಯಲ್ಲಿ ಯಾರೂ ವಾಹನಗಳನ್ನು ನಿಲ್ಲಿಸದಿರುವಂತೆ ಸೂಚನೆ ನೀಡಲಾಗಿದೆ.
ವೇದಿಕೆಯಲ್ಲಿ ಏಳು ಮಂದಿ ಮಾತ್ರ:ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿಯೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದರಾದ ಬಿ.ಎಸ್.ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲು, ಶಾಸಕ ಕೆ.ವಸಂತ ಬಂಗೇರ ಉಪಸ್ಥಿತರಿರುವರು.







