ಮಹಿಳಾ ಏಷ್ಯಾಕಪ್ ಹಾಕಿ : ಸಿಂಗಾಪುರ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಕಾಕಾಮಿಗಹರ(ಜಪಾನ್), ಅ.28: ಮಹಿಳಾ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಶನಿವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಸಿಂಗಾಪುರ ವಿರುದ್ಧ 10-0 ಅಂತರದಿಂದ ಭರ್ಜರಿ ಜಯ ದಾಖಲಿಸಿ ಶುಭಾರಂಭ ಮಾಡಿದೆ.
‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ನವನೀತ್ ಕೌರ್(3ನೆ,41ನೆ ನಿಮಿಷ), ರಾಣಿ(15ನೆ,18ನೆ ನಿಮಿಷ) ಹಾಗೂ ನವಜೋತ್ ಕೌರ್(30ನೆ ಹಾಗೂ 50ನೆ ನಿಮಿಷ) ಅವಳಿ ಗೋಲು ಬಾರಿಸಿದರೆ, ಲಾಲ್‌ರೆಮ್‌ಸಿಯಾಮಿ(18ನೆ ನಿಮಿಷ), ದೀಪಾ ಗ್ರೇಸ್ ಎಕ್ಕಾ(25ನೆ ನಿ.),ಗುರ್ಜಿತ್ ಸಿಂಗ್(41ನೆ ನಿ.) ಹಾಗೂ ಸೋನಿಕಾ(45ನೆ ನಿ.) ತಲಾ ಒಂದು ಗೋಲು ಬಾರಿಸಿ ಭಾರತ ಅಂಕದ ಖಾತೆ ತೆರೆಯಲು ನೆರವಾದರು.
ನವನೀತ್ ಹಾಗೂ ರಾಣಿ 3ನೆ ಹಾಗೂ 15ನೆ ನಿಮಿಷದಲ್ಲಿ ಗೋಲು ಬಾರಿಸಿ ಮೊದಲ ಕ್ವಾರ್ಟರ್‌ನಲ್ಲೇ ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು. ಭಾರತ 2ನೆ ಕ್ವಾರ್ಟರ್‌ನಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಇನ್ನೂ ನಾಲ್ಕು ಗೋಲು ಬಾರಿಸಿ ಮುನ್ನಡೆಯನ್ನು 6-0ಗೆ ವಿಸ್ತರಿಸಿತು. ದೀಪಾ 25ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸಿದರೆ, ಗುರ್ಜಿತ್ 45ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತದ ಪರ 7ನೆ ಗೋಲು ಬಾರಿಸಿದರು. ಸಿಂಗಾಪುರವನ್ನು ಒತ್ತಡಕ್ಕೆ ಸಿಲುಕಿಸಿದ ಭಾರತ 3ನೆ ಕ್ವಾರ್ಟರ್‌ನಲ್ಲಿ ನವ್‌ನೀತ್ ಹಾಗೂ ಸೋನಿಕಾ ನೆರವಿನಿಂದ ಇನ್ನೆರಡು ಗೋಲು ಬಾರಿಸಿತು. ನವಜೋತ್ 50ನೆ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಭಾರತಕ್ಕೆ 10-0 ಮುನ್ನಡೆ ಒದಗಿಸಿಕೊಟ್ಟರು.







