ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ರಾಜ್ ಠಾಕ್ರೆ

ಥಾಣೆ, ಅ.28: ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ 150ಕ್ಕೂ ಹೆಚ್ಚಿನ ಸ್ಥಾನ ಗಳಿಸಿದರೆ ಅದನ್ನು ವಿದ್ಯುನ್ಮಾನ ಮತಯಂತ್ರದ ಜಾದೂ ಎಂದು ಕರೆಯಬಹುದು ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್‌ಎಸ್) ಮುಖಂಡ ರಾಜ್ ಠಾಕ್ರೆ ಹೇಳಿದ್ದಾರೆ.
ಇತ್ತೀಚಿನ ಬೆಳವಣಿಗೆ ಗಮನಿಸಿದರೆ ಆಡಳಿತಾರೂಢ ಬಿಜೆಪಿ ನೆಲಕಚ್ಚುವುದು ಖಂಡಿತ. ಅಲ್ಲಿ ಬಿಜೆಪಿಯ ಬಗ್ಗೆ ಜನತೆ ಭ್ರಮನಿರಸನಗೊಂಡಿದ್ದಾರೆ. ಪ್ರಧಾನಿ ಮೋದಿ ನಡೆಸುತ್ತಿರುವ ಸಭೆಯಿಂದ ಜನರು ಹೊರನಡೆಯುತ್ತಿರುವ ದೃಶ್ಯವನ್ನು ಟಿವಿಯಲ್ಲಿ ನೋಡಬಹುದು. ಇದು ಈ ಹಿಂದೆ ನಡೆದಿರಲಿಲ್ಲ. ಇದು ಸ್ಪಷ್ಟ ಸಂದೇಶವನ್ನು ನೀಡುತ್ತಿದೆ ಎಂದವರು ಹೇಳಿದರು.
ಗುಜರಾತ್ ಚುನಾವಣೆಯ ದಿನಾಂಕವನ್ನು ವಿಳಂಬವಾಗಿ ಘೋಷಿಸುವಂತೆ ಚುನಾವಣಾ ಆಯೋಗದ ಮೇಲೆ ಸಾಕಷ್ಟು ಒತ್ತಡ ಹೇರಲಾಗಿತ್ತು ಎಂದ ಅವರು, ಶಾಸನಬದ್ಧ ಪ್ರಾಧಿಕಾರವಾಗಿರುವ ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಹೇಳಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲ್ಲಲು ಶೇ.50ರಷ್ಟು ಕಾರಣ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಚುನಾವಣಾ ಪ್ರಸಾರದ ಸಂದರ್ಭ ರಾಹುಲ್ ಮೋದಿಯನ್ನು ಅಣಕಿಸುವುದರಲ್ಲೇ ಕಾಲ ಕಳೆದರು. ಇದು ಮೋದಿಗೆ ನೆರವಾಯಿತು. ಇನ್ನುಳಿದ ಶೇ.50ರಲ್ಲಿ ಶೇ.15ರಷ್ಟು ಸಾಮಾಜಿಕ ಮಾಧ್ಯಮಗಳ ನೆರವು, ಶೇ.20ರಷ್ಟು ಶ್ರೇಯ ಬಿಜೆಪಿ ಮತ್ತು ಕಾರ್ಯಕರ್ತರಿಗೆ ಸಲ್ಲಬೇಕು. ಉಳಿದ ಕೆಲವೇ ಶೇ. ಮೋದಿ ವರ್ಚಸ್ಸಿಗೆ ಸಂದ ಶ್ರೇಯವಾಗಿದೆ ಎಂದವರು ನುಡಿದರು.







