ನಾಳೆ ಕಾನ್ಪುರದಲ್ಲಿ ಅಂತಿಮ ಏಕದಿನ ಪಂದ್ಯ
ಸರಣಿ ಗೆಲುವಿಗೆ ಭಾರತ - ಕಿವೀಸ್‌ಹೋರಾಟ
ಕಾನ್ಪುರ, ಅ.28: ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರಿಯ ಸರಣಿಯ ಮೂರನೆ ಮತ್ತು ಅಂತಿಮ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ರವಿವಾರ ನಡೆಯಲಿದೆ. ಉಭಯ ತಂಡಗಳು ಸರಣಿಯಲ್ಲಿ ತಲಾ ಒಂದು ಪಂದ್ಯಗಳಲ್ಲಿ ಜಯ ಗಳಿಸಿ 1-1 ಸಮಬಲ ಸಾಧಿಸಿದ್ದು, ಸರಣಿ ವಶಪಡಿಸಿಕೊಳ್ಳಲು ಅಂತಿಮ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿವೆೆ. ಮೊದಲ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ ಎರಡನೆ ಏಕದಿನ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ನ್ಯೂಝಿಲೆಂಡ್‌ಗೆ ತಿರುಗೇಟು ನೀಡಿತ್ತು.
ಉಭಯ ತಂಡಗಳು ಗುರುವಾರ ಆಗಮಿಸಿ ತಂಪಾದ ವಾತಾವರಣದಲ್ಲಿ ಪಂದ್ಯಕ್ಕೆ ಅಭ್ಯಾಸ ನಡೆಸಿದೆ. ಪುಣೆಯಲ್ಲಿ ಭಾರತದ ವೇಗಿಗಳಾದ ಭುವನೇಶ್ವರ ಕುಮಾರ್ (45ಕ್ಕೆ 3)ಮತ್ತು ಜಸ್‌ಪ್ರೀತ್ ಬುಮ್ರಾ (38ಕ್ಕೆ 2)ಅವರು ಕಿವೀಸ್‌ನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮುಂಬೈಯಲ್ಲಿ ಮೊದಲ ಪಂದ್ಯದಲ್ಲಿ ಕೈ ಸುಟ್ಟುಕೊಂಡಿದ್ದ ಭಾರತದ ಸ್ಪಿನ್ನರ್‌ಗಳು ಎರಡನೆ ಪಂದ್ಯದಲ್ಲಿ ಯಶಸ್ಸು ಗಳಿಸಿದ್ದರು. ಯಜುವೇಂದ್ರ ಚಹಾಲ್ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರೂ, ಎರಡನೆ ಪಂದ್ಯದಲ್ಲಿ 36ಕ್ಕೆ 2 ವಿಕೆಟ್ ಉಡಾಯಿಸಿದ್ದರು. ಕುಲ್‌ದೀಪ್ ಯಾದವ್ ಬದಲಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಅಕ್ಷರ್ ಪಟೇಲ್ ಅವರು ವಿಕೆಟ್ ಕೀಪರ್ ಲಥಾಮ್‌ರನ್ನು ಪೆವಿಲಿಯನ್‌ಗೆ ಅಟ್ಟಿದ್ದರು. ಪಾರ್ಟ್ ಟೈಮ್ ಬೌಲರ್ ಕೇದಾರ್ ಜಾಧವ್ 8 ಓವರ್‌ಗಳ ಬೌಲಿಂಗ್ ನಡೆಸಿ ಕೇವಲ 31 ರನ್ ನೀಡಿದ್ದರು. ಆದರೆ ಅವರಿಗೆ ವಿಕೆಟ್ ಸಿಗಲಿಲ್ಲ. ತವರಿನಲ್ಲಿ ಯಾದವ್‌ಗೆ ಅಂತಿಮ ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಭಾರತದ ಪರ ಬ್ಯಾಟಿಂಗ್‌ನಲ್ಲಿ ದಿನೇಶ್ ಕಾರ್ತಿಕ್ ನಂ.4 ಸರದಿಯಲ್ಲಿ ಬ್ಯಾಟಿಂಗ್ ನಡೆಸಿ ಔಟಾಗದೆ 64 ರನ್ ಗಳಿಸಿದ್ದರು. 2015ರ ವಿಶ್ವಕಪ್ ಬಳಿಕ ನಂ.4 ಕ್ರಮಾಂಕದಲ್ಲಿ 11 ಆಟಗಾರರನ್ನು ಆಡಿಸಿದೆ. ಆದರೆ ಯಾರಿಗೂ ಈ ತನಕ ಈ ಸ್ಥಾನ ಖಾಯಂ ಆಗಿಲ್ಲ. ಕಾರ್ತಿಕ್ ಈ ಸ್ಥಾನವನ್ನು ಭದ್ರ ಪಡಿಸುವ ಸಾಧ್ಯತೆ ಇದೆ. ಮೊದಲ ಪಂದ್ಯದಲ್ಲಿ ಅವರು ನಂ.5 ಸರದಿಯಲ್ಲಿ ಆಡಿದ್ದರು. ಆದರೆ ಅವರಿಗೆ ನಂ.4 ಆಡಲು ಹೆಚ್ಚು ಸೂಕ್ತವಾಗಿದೆ.
ಶಿಖರ್ ಧವನ್ ನಾಲ್ಕು ಏಕದಿನ ಪಂದ್ಯಗಳ ಇನಿಂಗ್ಸ್‌ಗಳಲ್ಲಿ ವೈಫಲ್ಯದ ಬಳಿಕ ಐದನೆ ಇನಿಂಗ್ಸ್‌ನಲ್ಲಿ 50ಕ್ಕಿಂತ ಹೆಚ್ಚು ರನ್ ಗಳಿಸಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಅವರು 68 ರನ್ ಗಳಿಸಿದ್ದಾರೆ. ಮೊದಲ ಪಂದ್ಯದಲ್ಲಿ 9ರನ್ ಗಳಿಸಿ ಔಟಾಗಿದ್ದರು. ಅಂತಿಮ ಪಂದ್ಯದಲ್ಲಿ ಧವನ್ ಅವರಿಂದ ಉತ್ತಮ ಕೊಡುಗೆ ನಿರೀಕ್ಷಿಸಲಾಗಿದೆ. ಧವನ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ರೋಹಿತ್ ಶರ್ಮ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಅವರು ಮೊದಲ ಪಂದ್ಯದಲ್ಲಿ 20 ರನ್ ಮತ್ತು ಎರಡನೆ ಪಂದ್ಯದಲ್ಲಿ 7 ರನ್ ಗಳಿಸಿದ್ದರು. ನ್ಯೂಝಿಲೆಂಡ್ ತಂಡ ಭಾರತದ ನೆಲದಲ್ಲಿ ಸರಣಿ ಗೆಲುವಿನ ಇತಿಹಾಸ ಬರೆಯಲು ಹೋರಾಟ ನಡೆಸಲಿದೆ. ರಾಸ್ ಟೇಲರ್ ಮತ್ತು ಲಥಾಮ್ ಮೊದಲ ಪಂದ್ಯದಲ್ಲಿ 200 ರನ್‌ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಈ ಜೋಡಿಗೆ ತಳವೂರಲು ಅವಕಾಶ ನೀಡಿದರೆ ಭಾರತದ ಸರಣಿ ಗೆಲುವಿನ ಕನಸಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಪಂದ್ಯದ ಸಮಯ
ಮಧ್ಯಾಹ್ನ 1:30 ಗಂಟೆಗೆ







