ಉತ್ತರ ಪ್ರದೇಶ ಸಚಿವನ ಬೆಂಗಾವಲು ವಾಹನ ಢಿಕ್ಕಿ: 8 ವರ್ಷದ ಬಾಲಕ ಮೃತ್ಯು

ಉತ್ತರ ಪ್ರದೇಶ, ಅ.29: ಉತ್ತರ ಪ್ರದೇಶದ ಸಚಿವರೊಬ್ಬರ ಬೆಂಗಾವಲು ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ 8 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.
ಅಪಘಾತದ ತೀವ್ರತೆಗೆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಚಿವ ಓಂ ಪ್ರಕಾಶ್ ರಾಜ್ ಭರ್ ಅವರ ಬೆಂಗಾವಲು ಪಡೆಯ ವಾಹನವೊಂದು ಬಾಲಕನಿಗೆ ಢಿಕ್ಕಿ ಹೊಡೆದಿತ್ತು ಎನ್ನಲಾಗಿದೆ.
ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಧನವನ್ನು ಮುಖ್ಯಮಂತ್ರ ಆದಿತ್ಯನಾಥ್ ಘೋಷಿಸಿದ್ದು, ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತಾಯಿ ಮತ್ತು ಅಜ್ಜಿಯ ಜೊತೆಗಿದ್ದ ಬಾಲಕ ಶಿವ ಗೋಸ್ವಾಮಿ ಕೊಲೊನೆಲ್ ಗಂಜ್ ಹಾಗು ಪರಸ್ಪುರ್ ಸಂಪರ್ಕಿಸುವ ರಸ್ತೆ ಬದಿ ಆಟವಾಡುತ್ತಿದ್ದ. ಈ ಸಂದರ್ಭ ಸಚಿವರ ಬೆಂಗಾವಲು ಪಡೆಯ ಒಂದು ವಾಹನ ಆತನಿಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭ ಒಂದೇ ಒಂದು ಬೆಂಗಾವಲು ಪಡೆಯ ವಾಹನ ನಿಲ್ಲಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹಾಗು ಕುಟುಂಬಸ್ಥರು ಆರೋಪಿಸಿದ್ದಾರೆ.
“ಕಾರು ಢಿಕ್ಕಿ ಹೊಡೆದ ಪರಿಣಾಮ ಬಾಲಕ ಕುಸಿದು ಬಿದ್ದ. ಸಚಿವರ ಕಾರು ಅಲ್ಲಿಂದ ಪರಾರಿಯಾಗಿತ್ತು. ಅವರ ಜೊತೆಗಿದ್ದವರು ವಾಹನ ನಿಲ್ಲಿಸಿದ್ದರೂ ನಂತರ ಅಲ್ಲಿಂದ ತೆರಳಿದರು” ಎಂದು ಬಾಲಕನ ತಂದೆ ವಿಶ್ವನಾಥ್ ಎಂಬವರು ಹೇಳಿದ್ದಾರೆ.
ಆದರೆ ಈ ಆರೋಪಗಳನ್ನು ಸಚಿವ ಓಂ ಪ್ರಕಾಶ್ ರಾಜ್ ಭರ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಅಪಘಾತ ನಡೆದ ಸಂದರ್ಭ ತಾನು 25 ಕಿ.ಮೀ. ದೂರದಲ್ಲಿ ಬೇರೆ ಕಾರಿನಲ್ಲಿದ್ದೆ ಎಂದಿದ್ದಾರೆ.







