ಧರ್ಮಸ್ಥಳ ತಲುಪಿದ ಪ್ರಧಾನಿಗೆ ಅದ್ದೂರಿ ಸ್ವಾಗತ

ಬೆಳ್ತಂಗಡಿ, ಅ.29: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 11 ಗಂಟೆ ಸುಮಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ.
ಮೋದಿಯವರು ಬಿಗಿ ಬಂದೋಬಸ್ತ್ ನಡುವೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳದ ಹೆಲಿಪ್ಯಾಡಿನಲ್ಲಿ ಬಂದಿಳಿದರು. ಅಲ್ಲಿಂದ ಧರ್ಮಸ್ಥಳ ಕ್ಷೇತ್ರಕ್ಕೆ ವಿಶೇಷ ಕಾರಿನಲ್ಲಿ ಆಗಮಿಸಿದರು. ಪ್ರಧಾನಿಗೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಬಳಿಕ ಪ್ರಧಾನಿಯನ್ನು ಡಾ.ಹೆಗ್ಗಡೆವರು ದೇಗುಲದ ಒಳಗಡೆ ಕರೆದೊಯ್ದರು. ಪ್ರಧಾನಿ ಮೋದಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ರುದ್ರಾಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು.ನಂತರ ಕೆಲಕಾಲ ಧ್ಯಾನ ಮಾಡಿದರು.
ದೇಗುಲದ ಪ್ರಾಕಾರದಲ್ಲಿರುವ ಅಣ್ಣಪ್ಪ ಸ್ವಾಮಿ, ಮಹಾಗಣಪತಿ, ಅಮ್ಮನವರ ದರ್ಶನ ಪಡೆದರು. 20 ನಿಮಿಷಗಳ ಕಾಲ ಮೋದಿ ಅಲ್ಲಿದ್ದರು. ದೇವಸ್ಥಾನದ ಗರ್ಭಗುಡಿ ಪ್ರವೇಶಿಸುವಾಗ ವಸ್ತ್ರ ಸಂಹಿತೆಯನ್ನು ಮೋದಿ ಕಟ್ಟು ನಿಟ್ಟಾಗಿ ಪಾಲಿಸಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರು ಉಜಿರೆಯ ಶ್ರೀ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶೇಷ ಕಾರಿನಲ್ಲಿ ತೆರಳಿದರು.







