ತಣ್ಣೀರು ಸ್ನಾನದಿಂದ ಸಿಗುವ ಈ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರಲೇಬೇಕು…
ನೀವು ತಿಳಿದಿರಬೇಕಾದ ತಣ್ಣೀರು ಸ್ನಾನದ ಲಾಭಗಳು ಬೆಳ್ಳಂಬೆಳಿಗ್ಗೆ ಅಥವಾ ಸಂಜೆ ಕೆಲಸದಿಂದ ಮರಳಿದ ಬಳಿಕ ತಣ್ಣೀರು ಸ್ನಾನ ಸ್ವಲ್ಪ ಕಷ್ಟವೆನ್ನಿಸಬಹುದು. ಆದರೆ ತಣ್ಣೀರು ಸ್ನಾನದ ಆರೋಗ್ಯ ಲಾಭಗಳನ್ನು ತಿಳಿದುಕೊಂಡರೆ ನೀವುಖಂಡಿತವಾಗಿಯೂ ಎರಡನೇ ವಿಚಾರ ಮಾಡದೆ ಅದನ್ನಪ್ಪಿಕೊಳ್ಳುತ್ತೀರಿ.
ಬೆಳಿಗ್ಗೆ ತಣ್ಣೀರು ಸ್ನಾನ ಮಾಡುವುದರಿಂದ ಆಗಾಗ್ಗೆ ಅನಾರೋಗ್ಯಕ್ಕೆ ಗುರಿಯಾಗುವುದು ತಪ್ಪುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ತಣ್ಣಿರು ಸ್ನಾನ ಯಾವುದೇ ವಿಧದಲ್ಲಿಯೂ ಅನಾರೋಗ್ಯಕ್ಕೆ ಚಿಕಿತ್ಸೆಯಲ್ಲದಿದ್ದರೂ ಅದು ವ್ಯಕ್ತಿಗೆ ದಿನವಿಡೀ ಅಗತ್ಯವಿರುವ ಚೈತನ್ಯವನ್ನು ನೀಡುತ್ತದೆ.
ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ
ತಣ್ಣಿರು ಸ್ನಾನವು ಶರೀರದಲ್ಲಿ ರಕ್ತಸಂಚಾರ ಉತ್ತಮಗೊಳ್ಳಲು ನೆರವಾಗುತ್ತದೆ. ತಣ್ಣೀರು ರಕ್ತವು ನಿಮ್ಮ ಅಂಗಾಂಗಗಳಿಗೆ ತಲುಪಲು ಕಾರಣವಾಗುತ್ತದೆ. ರಕ್ತಸಂಚಾರ ಉತ್ತಮವಾಗಿದ್ದಾಗ ನಮ್ಮ ಹೃದಯವೂ ಆರೋಗ್ಯಯುತವಾಗಿರುತ್ತದೆ.
ತ್ವರಿತ ಚೇತರಿಕೆ
ಕಠಿಣ ವ್ಯಾಯಾಮದ ಬಳಿಕ ನಮ್ಮ ಸ್ನಾಯುಗಳು ಮತ್ತು ಸಂದುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ತಣ್ಣೀರು ಸ್ನಾನ ಮಾಡುವುದರಿಂದ ನೋವು ಶಮನಗೊಳ್ಳುತ್ತದೆ. ರಕ್ತಸಂಚಾರ ಉತ್ತಮಗೊಳ್ಳುವುದರಿಂದ ವ್ಯಾಯಾಮದ ದಣಿವು ಶೀಘ್ರವಾಗಿ ಪರಿಹಾರಗೊಳ್ಳುತ್ತದೆ.
ಖಿನ್ನತೆಯಿಂದ ಬಿಡುಗಡೆ
ಮಿದುಳಿನಲ್ಲಿಯ ‘ಬ್ಲೂ ಸ್ಪಾಟ್’ ಖಿನ್ನತೆಯನ್ನು ನಿವಾರಿಸುವ ನೋರಾಡ್ರೆನಲಿನ್ ಎಂಬ ರಾಸಾಯನಿಕವನ್ನು ಉತ್ಪಾದಿಸುವ ಪ್ರಮುಖ ಮೂಲವಾಗಿದೆ. ತಣ್ಣೀರು ಸ್ನಾನವು ಈ ‘ಬ್ಲೂ ಸ್ಪಾಟ್’ಅನ್ನು ಉದ್ದೀಪಿಸುವಲ್ಲಿ ನೆರವಾಗುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ತಣ್ಣೀರು ಸ್ನಾನವು ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅದು ವೈರಸ್‌ಗಳ ವಿರುದ್ಧ ಹೋರಾಡುವ ಬಿಳಿಯ ರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ತನ್ಮೂಲಕ ರೋಗ ನಿರೋಧಕ ಶಕ್ತಿಯನ್ನು ಕ್ರಿಯಾಶೀಲಗೊಳಿಸುತ್ತದೆ.
ಫಲವತ್ತತೆಯನ್ನು ಹೆಚ್ಚಿಸುತ್ತದೆ
ತಣ್ನೀರು ಸ್ನಾನವು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎನ್ನುವುದು ಹಲವಾರು ಅಧ್ಯಯನಗಳಿಂದ ಕಂಡು ಬಂದಿದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚುವುದರಿಂದ ಅವರ ಫಲವತ್ತತೆಯು ಹೆಚ್ಚುತ್ತದೆ.
ಶಕ್ತಿಯನ್ನು ಹೆಚ್ಚಿಸುತ್ತದೆ
ಉದ್ಯೋಗದ ಜಂಜಾಟಗಳಿಂದ ಪಾರಾಗಿ ಮನೆಗೆ ಮರಳಿದಾಗ ಅಥವಾ ವ್ಯಾಯಾಮದ ಬಳಿಕ ತಣ್ಣೀರು ಸ್ನಾನ ಮಾಡುವುದರಿಂದ ಶರೀರಕ್ಕೆ ಅಗತ್ಯ ಶಕ್ತಿ ದೊರೆಯುತ್ತದೆ. ತಣ್ಣೀರು ಸ್ನಾನದಿಂದ ರಕ್ತವು ಶರೀರದ ಎಲ್ಲ ಭಾಗಗಳಿಗೂ ತಲುಪುತ್ತದೆ ಮತ್ತು ಶರೀರಕ್ಕೆ ಚೈತನ್ಯ ನೀಡುತ್ತದೆ.