ತನ್ನ ಟ್ವಿಟರ್ ಜನಪ್ರಿಯತೆ ಹೆಚ್ಚಳ ಕುರಿತ ಸಂಶಯಗಳಿಗೆ ರಾಹುಲ್ ಗಾಂಧಿಯಿಂದ ಬಂತು ಈ ವಿಶಿಷ್ಟ ಪ್ರತಿಕ್ರಿಯೆ

ಹೊಸದಿಲ್ಲಿ, ಅ.29: ಟ್ವಿಟರ್ ನಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಲು ರಾಹುಲ್ ಗಾಂಧಿ ಆಟೊಮ್ಯಾಟಿಕ್ ಬೋಟ್ಸ್ ಅನ್ನು ಬಳಸುತ್ತಿದ್ದಾರೆ ಎನ್ನುವ ವರದಿಯ ಬಗ್ಗೆ ಸ್ವತಃ ರಾಹುಲ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
‘ಪಿಡಿ’ ಎಂಬ ಹೆಸರಿನ ನಾಯಿಯೊಂದರ ವಿಡಿಯೋವನ್ನು ಪೋಸ್ಟ್ ಮಾಡಿ, “ಈ ವ್ಯಕ್ತಿಗೆ ಟ್ವೀಟ್ ಮಾಡುತ್ತಿರುವವರು ಯಾರು ಎಂದು ಜನರು ಪ್ರಶ್ನಿಸುತ್ತಿದ್ದಾರೆ… ಅದು ನಾನು ‘ಪಿಡಿ’. ಟ್ವೀಟ್ ಮೂಲಕ ನಾನು ಏನು ಮಾಡಬಹುದು ಎಂದು ನೋಡಿ” ಎಂದವರು ಟ್ವೀಟ್ ಮಾಡಿದ್ದಾರೆ.
ಫಾಲೋವರ್ಸ್ ಸಂಖ್ಯೆ ಹಾಗು ರಿಟ್ವೀಟ್ ಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಿಂದಾಗಿ ರಾಹುಲ್ ಗಾಂಧಿ ಇತ್ತೀಚೆಗೆ ಸುದ್ದಿಯಾಗಿದ್ದರು. ಜುಲೈ ಹಾಗು ಸೆಪ್ಟಂಬರ್ ಅವಧಿಯಲ್ಲಿ ಅವರ ಟ್ಟಿಟ್ಟರ್ ಖಾತೆ @OfficeOfRG ಗೆ ಒಂದು ಮಿಲಿಯನ್ ಖಾತೆಗಳು ಹೊಸ ಫಾಲೋವರ್ಸ್ ಗಳಾಗಿತ್ತು. ಪ್ರಧಾನಿ ಮೋದಿ ಹಾಗು ಅರವಿಂದ್ ಕೇಜ್ರಿವಾಲ್ ಅವರಿಗಿಂತಲೂ ರಾಹುಲ್ ಖಾತೆ ಹೆಚ್ಚು ಜನಪ್ರಿಯವಾಗುತ್ತಿದೆ ಎನ್ನಲಾಗುತ್ತಿತ್ತು.
ಆದರೆ ರಾಹುಲ್ ಗಾಂಧಿಯವರು ಬೋಟ್ಸ್ ಮೂಲಕ ತನ್ನ ಖಾತೆಯ ಜನಪ್ರಿಯತೆಯನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬೋಟ್ಸ್ ರಾಹುಲ್ ರ ಟ್ವೀಟ್ ಗಳನ್ನು ರಿಟ್ವೀಟ್ ಮಾಡುತ್ತಿದೆ ಎನ್ನಲಾಗಿತ್ತು. ಈ ವರದಿಗಳಿಗೆ ರಾಹುಲ್ ‘ಪಿಡಿ’ ಎಂಬ ಹೆಸರಿನ ನಾಯಿಯ ವಿಡಿಯೋ ಮೂಲಕ ಈ ಪ್ರತಿಕ್ರಿಯೆ ನೀಡಿದ್ದಾರೆ.







