ರಾಷ್ಟ್ರಮಟ್ಟದ ವಾಲಿಬಾಲ್ : ದ.ಕ. ಜಿಲ್ಲಾ ತಂಡ ಚಾಂಪಿಯನ್

ಮಂಗಳೂರು, ಅ. 29: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಪಿಯುಸಿ ಹಂತದ (19 ವರ್ಷ ವಯೋಮಾನದೊಳಗಿನ) ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಮೈಸೂರಿನ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಈ ಪಂದ್ಯಾಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 32 ತಂಡಗಳು ಭಾಗವಹಿಸಿದ್ದವು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎರಡು ತಂಡಗಳು ಫೈನಲ್ ಹಂತಕ್ಕೆ ಪ್ರವೇಶ ಪಡೆದಿತ್ತು. ಕುತೂಹಲಕಾರಿಯಾಗಿ ಸಾಗಿದ ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡ ಉಡುಪಿ ಜಿಲ್ಲಾ ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಪ್ರಶಸ್ತಿ ವಿಜೇತ ದಕ್ಷಿಣ ಕನ್ನಡ ಜಿಲ್ಲಾ ತಂಡದಲ್ಲಿ ಸೌರವ್, ಮಾನಸ್, ಶೌಕತ್ ಅಲಿ, ತರುಣ್, ಚರಣ್, ಪವನ್, ಸಂಜಯ್, ಶಹೀರ್, ಅಭಿಷೇಕ್, ರಚನ್, ರಿಷಿತ್ ಹಾಗೂ ದೀಕ್ಷಿತ್ ತಮ್ಮ ಪ್ರದರ್ಶನ ತೋರಿದ್ದಾರೆ.
ಬಾಲಕಿಯರ ತಂಡಕ್ಕೂ ಚಾಂಪಿಯನ್ ಪಟ್ಟ
ಇದೇ ವೇಳೆ ನಡೆದ ಬಾಲಕಿಯರ ಪಂದ್ಯಾಟದಲ್ಲೂ ದಕ್ಷಿಣ ಕನ್ನಡ ಜಿಲ್ಲಾ ಬಾಲಕಿಯರ ತಂಡ ಬೆಂಗಳೂರು ತಂಡವನ್ನು ಪರಾಭವಗೊಳಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.





