ನ.1ರಂದು 'ನಾಡಹಬ್ಬಕ್ಕೆ' ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ಬೆಂಗಳೂರು, ಅ. 29: ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ನವೆಂಬರ್ 1ರಂದು ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿರುವ ನಾಡಹಬ್ಬ ಕನ್ನಡರಾಜ್ಯೋತ್ಸವ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಐದು ದಶಕಗಳಿಂದಲೂ ಸಮಿತಿ ನಗರದ ಚಾಮರಾಜಪೇಟೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ವಿಶೇಷವಾಗಿ ಆಚರಿಸುತ್ತಿದೆ. ಅಂದು ಬೆಳಗ್ಗೆ 10.30ಕ್ಕೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದು, ಭುವನೇಶ್ವರಿ ಮೆರವಣಿಗೆ ಉದ್ಘಾಟಿಸಲಿದ್ದಾರೆ.
ಗೃಹ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಸಚಿವ ಎಂ.ಕೃಷ್ಣಪ್ಪ, ಮೇಯರ್ ಸಂಪತ್ ರಾಜ್, ಶಾಸಕರಾದ ಝಮೀರ್ ಅಹ್ಮದ್, ರಿಝ್ವಾನ್ ಅರ್ಶದ್, ನಿವೃತ್ತ ಅಧಿಕಾರಿ ಜಿ.ಎ.ಭಾವಾ, ಸಂಸದ ಪಿ.ಸಿ.ಮೋಹನ್, ಪಾಲಿಕೆ ಸದಸ್ಯೆ ಸುಜಾತಾ ಪಾಲ್ಗೊಳ್ಳಲಿದ್ದಾರೆ.
ಚಾಮರಾಜಪೇಟೆಯ ಮಲೈಮಹದೇಶ್ವರ ಸ್ವಾಮಿ, ರಾಜರಾಜೇಶ್ವರಿ ಅಮ್ಮ, ಆದಿಪರಾಶಕ್ತಿ ಅಮ್ಮ, ಆದಿಶಕ್ತಿ ಚಿಕ್ಕಣ್ಣಮ್ಮನವರ ವೈಭವದ ಮೆರವಣಿಗೆಯನ್ನು ಕಂಸಾಳೆ, ಪಟದ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ನಂದಿ ಧ್ವಜ, ಕೀಲುಕುದುರೆ ಸೇರಿ ಇನ್ನಿತರ ಜಾನಪದ ಕಲಾತಂಡಗಳೊಂದಿಗೆ ನಾಡಹಬ್ಬ ಆಚರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.







