ರಾಜ್ಯದಲ್ಲಿ ಇನ್ನೊಂದು ವಾರದಲ್ಲಿ ಮಳೆ ಆಗುವ ನಿರೀಕ್ಷೆ: ಶ್ರೀನಿವಾಸ್
ಬೆಂಗಳೂರು, ಅ. 29: ಈಶಾನ್ಯ ಮುಂಗಾರು ಮಳೆ ಆರಂಭವಾಗಿ ಎರಡು ದಿನ ಕಳೆದಿದ್ದು, ರಾಜ್ಯದಲ್ಲಿ ಇನ್ನೂ ಒಂದು ವಾರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ತಿಳಿಸಿದ್ದಾರೆ.
ಎರಡು ವಾರದಿಂದ ಮುಂಗಾರು ಕ್ಷೀಣವಾಗಿ ರಾಜ್ಯದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿತ್ತು. ಹಿಂಗಾರು ಆರಂಭವಾಗಿದ್ದರೂ ತಮಿಳುನಾಡು ಮತ್ತು ಕೇರಳ ರಾಜ್ಯದಲ್ಲಿ ಚುರುಕ್ಕಾಗಿದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಎಲ್ಲೂ ಹಿಂಗಾರು ಮಳೆ ಇಲ್ಲ ಎಂದು ಹೇಳಿದ್ದಾರೆ.
ಹವಾಮಾನ ಮುನ್ಸೂಚನೆಯನ್ನು ಗಮನಿಸಿದರೆ ಸದ್ಯಕ್ಕಂತೂ ಮಳೆ ತರುವಂತಹ ವಾಯುಭಾರ ಕುಸಿತ, ಚಂಡಮಾರುತ ಉಂಟಾಗುವ ಸಂಭವವಿಲ್ಲ. ನ.5ರ ವೇಳೆಗೆ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಮುಂಗಾರು ಆರ್ಭಟಿಸಿದ್ದರೂ ರಾಜ್ಯದ ಒಟ್ಟಾರೆ ವಾಡಿಕೆ ಮಳೆ ಪ್ರಮಾಣದಲ್ಲಿ ಶೇ.8ರಷ್ಟು ಕೊರತೆ ಕಂಡು ಬರುತ್ತಿದೆ. ಆದರೆ, ಅಕ್ಟೋಬರ್‌ನಲ್ಲಿ ಬಿದ್ದ ಕುಂಭದ್ರೋಣ ಮಳೆಯಿಂದಾಗಿ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.27ರಷ್ಟು ಹೆಚ್ಚು ಮಳೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.







