ವಿಜ್ಞಾನಿಗಳ ಆಕ್ರೋಶ: ಜ್ಯೋತಿಷ ಶಾಸ್ತ್ರ ಕಾರ್ಯಾಗಾರ ರದ್ದು
ಬೆಂಗಳೂರು, ಅ.29: ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನ.25ರಿಂದ ಎರಡು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ ‘ಜ್ಯೋತಿಷ್ಯ-ವೈಯಕ್ತಿಕ ಅಭಿವೃದ್ಧಿಗೆ ವೈಜ್ಞಾನಿಕ ಸಾಧನ’ ಎಂಬ ಕಾರ್ಯಾಗಾರಕ್ಕೆ ವಿಜ್ಞಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ್ದರಿಂದ ಈ ಕಾರ್ಯಾಗಾರವನ್ನು ರದ್ದು ಪಡಿಸಲಾಗಿದೆ.
ಜ್ಯೋತಿಷ್ಯ ಕಾರ್ಯಾಗಾರದ ಆಯೋಜನೆಯನ್ನು ವಿರೋಧಿಸಿ ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳು, ವಿಚಾರವಾದಿಗಳು ಆಕ್ರೋಶ ವ್ಯಕ್ತಪಡಿಸಿ ಐಐಎಸ್‌ಸಿ ನಿರ್ದೇಶಕ ಅನುರಾಗ ಕಶ್ಯಪ್‌ಗೆ ಪತ್ರ ಬರೆದು, ಜ್ಯೋತಿಷ್ಯ ಶಾಸ್ತ್ರ ಎಂಬುದು ಕೇವಲ ನಂಬಿಕೆ, ಅದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.
ವಿಜ್ಞಾನಿಗಳಿಂದಲೇ ಕೂಡಿರುವ ಐಐಎಸ್‌ಸಿ ಆವರಣದಲ್ಲಿ ಜ್ಯೋತಿಷ್ಯ ಶಾಸ್ತ್ರ ಗಾರ್ಯಾಗಾರ ನಡೆಯುಲು ಉದ್ದೇಶಿಸಿದ್ದು. ಅವಮಾನಕರ ವಿಚಾರ. ಈಗಾಗಲೇ ದೇಶದಲ್ಲಿ ವೈಜ್ಞಾನಿಕ ಆಲೋಚನೆ ಅಪಾಯದ ಸುಳಿಯಲ್ಲಿರುವಾಗ ಇಂತಹ ಕಾರ್ಯಾಗಾರವನ್ನು ನಡೆಸುವುದರಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆ ಉಂಟಾಗಲಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಾಗಾರ ರುದ್ದಪಡಿಸಿಲಾಗಿದೆ.
ಖ್ಯಾತ ವಿಜ್ಞಾನಿ ಡಾ.ಸಿ.ವಿ.ರಾಮನ್, ಭಾರತರತ್ನ ಡಾ.ಸಿ.ಎನ್.ಆರ್.ರಾವ್ ಹಾಗೂ ರೊದ್ದಂ ನರಸಿಂಹ ಅವರಂತಹ ಮಹನೀಯರು ಕಟ್ಟಿದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಜ್ಯೋತಿಷ್ಯ ಕಾರ್ಯಾಗಾರ ಆಯೋಜಿಸಿದ್ದು, ಹಾಸ್ಯಾಸ್ಪದ, ಅವಿವೇಕದ ನಿರ್ಧಾರ ಎಂದು ಹಿರಿಯ ವಿಜ್ಞಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.







