ಗುಜರಾತ್‌ನಲ್ಲಿ ಜಾತಿ ಸಮ್ಮಿಶ್ರಣ ಪ್ರಯತ್ನ ತಿರುಗುಬಾಣವಾದೀತು: ಕಾಂಗ್ರೆಸ್‌ಗೆ ಬಿಜೆಪಿ ಎಚ್ಚರಿಕೆ

ಹೊಸದಿಲ್ಲಿ, ಅ.29: ಗುಜರಾತ್‌ನಲ್ಲಿ ಜಾತಿ ಸಮ್ಮಿಶ್ರಣದ ಮೂಲಕ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬಹುದು ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿಕೊಂಡಿದೆ. ಆದರೆ ಈ ಪ್ರಯತ್ನ ಕಾಂಗ್ರೆಸ್‌ಗೆ ತಿರುಗುಬಾಣವಾದೀತು ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ಗುಜರಾತ್‌ನಲ್ಲಿ ಒಬಿಸಿ (ಇತರ ಹಿಂದುಳಿದ ಜಾತಿ) ಮತ್ತು ಪಾಟಿದಾರ್(ಪಟೇಲ್ ಸಮುದಾಯ) - ಈ ಎರಡು ಸಮುದಾಯದ ಮತದಾರರು ರಾಜ್ಯದಲ್ಲಿರುವ ಒಟ್ಟು ಮತದಾರರ ಸಂಖ್ಯೆಯ ಅರ್ಧಾಂಶಕ್ಕೂ ಹೆಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎರಡೂ ಸಮುದಾಯದ ಮುಖಂಡರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಮತದಾರರನ್ನು ಓಲೈಸಲು ಕಾಂಗ್ರೆಸ್ ಮುಂದಾಗಿದೆ. ಆದರೆ ಈ ಎರಡೂ ಸಮುದಾಯವೂ ತನ್ನದೇ ಆದ ಹಿತಾಸಕ್ತಿ ಹಾಗೂ ಮಹಾತ್ವಾಕಾಂಕ್ಷೆಯನ್ನು ಹೊಂದಿರುವ ಕಾರಣ ಈ ಪ್ರಯತ್ನ ವಿರೋಧಾಭಾಸವಾಗಿದೆ ಎಂದು ಬಿಜೆಪಿ ಮುಖಂಡರು ಟೀಕಿಸಿದ್ದಾರೆ.
ಪಟೇಲ್ ಸಮುದಾಯದವರಿಗೆ ಮೀಸಲಾತಿ ವಿಷಯದ ಕುರಿತು ತನ್ನ ಬದ್ಧತೆಯನ್ನು ನವೆಂಬರ್ 3ರ ಒಳಗೆ ಘೋಷಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪಟೇಲ್ ಮೀಸಲಾತಿ ಚಳವಳಿಯ ಮುಖಂಡ ಹಾರ್ದಿಕ್ ಪಟೇಲ್ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿರುವುದು ಈ ವಿರೋದಾಭಾಸದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಒಬಿಸಿ ಮೀಸಲಾತಿ ಚಳವಳಿಯ ಮುಖಂಡ ಅಲ್ಪೇಶ್ ಠಾಕೂರ್‌ರನ್ನು ಕಾಂಗ್ರೆಸ್ ಇತ್ತೀಚೆಗೆ ಪಕ್ಷಕ್ಕೆ ಸೇರಿಸಿಕೊಂಡಿದೆ. ಆದರೆ ಹಾಲಿ ಒಬಿಸಿ ಕೋಟಾದಲ್ಲಿ ಪಟೇಲ್ ಸಮುದಾಯವನ್ನು ಸೇರಿಸಿಕೊಳ್ಳಬೇಕು ಎಂಬ ಬೇಡಿಕೆಗೆ ಅಲ್ಪೇಶ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದು ಕಾಂಗ್ರೆಸ್‌ಗೆ ಉಭಯಸಂಕಟವಾಗಿದೆ ಎಂದು ಬಿಜೆಪಿ ಹೇಳುತ್ತಿದೆ.
ಸಂವಿಧಾನಾತ್ಮಕವಾಗಿ ಮೀಸಲಾತಿ ಕೋಟಾವನ್ನು ಶೇ.50ಕ್ಕೆ ನಿಗದಿಗೊಳಿಸಿರುವ ಕಾರಣ ಪಟೇಲ್ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಖಾತರಿಪಡಿಸುವುದು ಯಾವುದೇ ಪಕ್ಷಕ್ಕೆ ಅಸಾಧ್ಯವಾದ ಮಾತಾಗಿದೆ. ಈ ಸಮುದಾಯವನ್ನು ಒಬಿಸಿ ಗುಂಪಿಗೆ ಸೇರಿಸುವ ಪ್ರಯತ್ನವನ್ನು ನಡೆಸುವ ಪಕ್ಷ, ರಾಜ್ಯದ ಮತದಾರರಲ್ಲಿ ಶೇ.40ರಷ್ಟು ಪ್ರಾತಿನಿಧ್ಯ ಹೊಂದಿರುವ ಹಿಂದುಳಿದ ಜಾತಿಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ, ಹಾರ್ದಿಕ್ ಬೇಡಿಕೆಯನ್ನು ಈಡೇರಿಸುವುದು ಸುಲಭಸಾಧ್ಯವಲ್ಲ ಎನ್ನಲಾಗಿದೆ.
1995ರಿಂದಲೂ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಸಿಹಿಯನ್ನೇ ಉಣ್ಣುತ್ತಿರುವ ಬಿಜೆಪಿ, ಈ ಬಾರಿ ಹಿಂದುತ್ವ ಹಾಗೂ ವಿಕಾಸ(ಅಭಿವೃದ್ಧಿ)- ಈ ಎರಡು ಅಜೆಂಡಾದೊಂದಿಗೆ ಮತದಾರರ ಓಲೈಕೆಗೆ ಮುಂದಾಗಿದೆ. ಪಟೇಲ್ ಸಮುದಾಯದ ಒಂದು ವರ್ಗ ಬಿಜೆಪಿಯನ್ನು ವಿರೋಧಿಸುತ್ತಿದ್ದರೂ , ಈ ಸಮುದಾಯದ ಬೆಂಬಲವನ್ನು ಬಿಜೆಪಿ ಪ್ರಮುಖವಾಗಿ ನೆಚ್ಚಿಕೊಂಡಿದೆ. ಪಟೇಲ್ ಸಮುದಾಯದ ಯುವಮುಖಂಡ ಹಾರ್ದಿಕ್ ಪಟೇಲ್ ನಿರೀಕ್ಷಿಸಿದಷ್ಟು ಮತಗಳನ್ನು ಬಿಜೆಪಿಯಿಂದ ಸೆಳೆದುಕೊಳ್ಳಲು ಶಕ್ತರಾಗಲಿಕ್ಕಿಲ್ಲ ಎಂದು ಬಿಜೆಪಿ ಭಾವಿಸಿದೆ. ಕಳೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ಪಟೇಲ್ ಸಮುದಾಯದ ಪ್ರಭಾವೀ ಹಿರಿಯ ಮುಖಂಡ ಕೇಶುಭಾಯ್ ಪಟೇಲ್ , ಗುಜರಾತ್ ಪರಿವರ್ತನ್ ಪಾರ್ಟಿ(ಜಿಪಿಪಿ) ಎಂಬ ಪಕ್ಷ ಕಟ್ಟಿ ಬಿಜೆಪಿ ವಿರುದ್ಧ ಸೆಣಸಿದರೂ, ಅವರ ಪಕ್ಷ ಕೇವಲ 2 ಸ್ಥಾನ ಗೆಲ್ಲಲು ಶಕ್ತವಾಗಿತ್ತು. ಬಳಿಕ ಜಿಪಿಪಿ ಬಿಜೆಪಿ ಜೊತೆ ವಿಲೀನವಾಗಿತ್ತು .
ಆದರೆ , ಹಾರ್ದಿಕ್ ಪಟೇಲ್ ಮತ್ತು ಕೇಶುಭಾಯ್ ಪಟೇಲ್ ಚಿಂತನೆಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಕೇಶುಭಾಯ್ ಪಟೇಲ್ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಟೀಕಾಸ್ತ್ರವನ್ನು ಪ್ರಚಾರ ಕಾರ್ಯದಲ್ಲಿ ಪ್ರಮುಖವಾಗಿ ಬಳಸಿದ್ದರು. ಆದರೆ ಹಾರ್ದಿಕ್, ಪಟೇಲ್ ಸಮುದಾಯದ ಮೀಸಲಾತಿ ವಿಷಯದಲ್ಲಿ ಬಿಜೆಪಿಯ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ. ಇದು ಮತದಾರರ ಮೇಲೆ ಹೆಚ್ಚಿನ ಪ್ರಭಾವ ಬೀರಬಹುದು ಎಂದು ನಿರೀಕ್ಷಿಸಲಾಗಿದೆ.
2012ರ ಚುನಾವಣೆಯಲ್ಲಿ ಬಿಜೆಪಿ 116 ಸ್ಥಾನ ಗಳಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ 150 ಸ್ಥಾನ ಗಳಿಸುವ ಗುರಿಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಕ್ಷದ ಮುಖಂಡರಿಗೆ ನೀಡಿದ್ದಾರೆ. ಪ್ರಧಾನಿ ಮೋದಿಯ ವರ್ಚಸ್ಸು, ಸಂಘಟನಾ ಶಕ್ತಿ ಈ ಬಾರಿಯೂ ಪಕ್ಷದ ಗೆಲುವಿಗೆ ಪೂರಕವಾಗಲಿದೆ ಎಂದು ಬಿಜೆಪಿ ಮುಖಂಡರು ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ಮುಖಂಡ ಶಂಕರ್‌ಸಿಂಗ್ ವೇಲಾ ಪಕ್ಷದಿಂದ ಹೊರಬಂದು ತನ್ನದೇ ಪಕ್ಷ ಸ್ಥಾಪಿಸಿರುವುದು ಕೂಡಾ ಬಿಜೆಪಿ ಗೆಲುವನ್ನು ಸುಗಮಗೊಳಿಸಲಿದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದು.







