ಪೇಜಾವರ ಶ್ರೀ ಮಡೆಸ್ನಾನದಂತಹ ಅವೈಜ್ಞಾನಿಕ ಪದ್ಧತಿ ನಿಲ್ಲಿಸಲಿ
ವಿರಕ್ತಮಠದ ಗುರುಬಸವ ಸ್ವಾಮೀಜಿ ಸವಾಲು

ಚಿಕ್ಕಮಗಳೂರು, ಅ.29: ‘ಹಿಂದೂ ಧರ್ಮದಲ್ಲಿರುವ ಮಡೆಸ್ನಾನದಂತಹ ಅವೈಜ್ಞಾನಿಕ ಪದ್ಧತಿಗಳನ್ನು ಪೇಜಾವರ ಶ್ರೀ ಮೊದಲು ನಿಲ್ಲಿಸಬೇಕು. ಅಲ್ಲಿಯವರೆಗೂ ಲಿಂಗಾಯತ ಧರ್ಮದ ಬಗ್ಗೆ ಅವರು ಮಾತನಾಡಬಾರದು’ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಸವಾಲು ಹಾಕಿದ್ದಾರೆ.
ನಗರದ ವಿರಕ್ತಮಠ ಬಸವಮಂದಿರದಲ್ಲಿ ರವಿವಾರ ನಡೆದ ಸ್ವತಂತ್ರ ಲಿಂಗಾಯತ ಧರ್ಮ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವುದಕ್ಕೆ ಪೇಜಾವರ ಶ್ರೀಗೆ ಯಾವುದೇ ನೈತಿಕತೆ ಇಲ್ಲ. ಮೊದಲು ಅವರ ಧರ್ಮವನ್ನು ಅವರು ಸರಿಪಡಿಸಲಿ ಎಂದು ಹೇಳಿದರು.
ಹಿಂದೂ ಧರ್ಮ ಧರ್ಮವಲ್ಲ ಅದೊಂದು ಸಂಸ್ಕೃತಿ. ವೀರಶೈವ ಧರ್ಮ ಹಿಂದೂ ಧರ್ಮವನ್ನು ಅವಲಂಬಿತವಾಗಿ ವೈದಿಕ ಮಾರ್ಗ ಮತ್ತು ಸಂಸ್ಕೃತ ವನ್ನು ಅನುಸರಿಸುತ್ತಿರುವುದರಿಂದ ಲಿಂಗಾಯತರು ಆ ಎರಡೂ ಧರ್ಮಗಳಿಗೆ ಸೇರಿದವರಲ್ಲ. ಈ ಹಿನ್ನೆಲೆಯಲ್ಲಿ ಹಿಂದೂಗಳೇ ಬೇರೆ, ವೀರಶೈವರೇ ಬೇರೆ, ಹಾಗೂ ಲಿಂಗಾಯಿತರೇ ಬೇರೆ ಎಂದು ತಿಳಿಸಿದರು.
ಭಕ್ತಿ ಭಂಡಾರಿ ಬಸವಣ್ಣ ಅವರಿಂದ ಸ್ವತಂತ್ರ ಧರ್ಮವಾಗಿಯೇ ಸ್ಥಾಪನೆಯಾಗಿರುವಂತಹ ಲಿಂಗಾಯತ ಧರ್ಮದ ಅನುಯಾಯಿಗಳು ನಾವು ಎಂಬುದನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು. ದ್ವಂದ್ವವನ್ನು ಬಿಟ್ಟು ಆ ಧರ್ಮದ ಅಡಿಯಲ್ಲೇ ಸಾಗಬೇಕು ಎಂದು ಕರೆ ನೀಡಿದರು.
ಕರಡಿಗವಿ ಮಠದ ಶಂಕರಾನಂದ ಸ್ವಾಮೀಜಿ ಮಾತನಾಡಿ, ಲಿಂಗಾಯತರು ಬಸವಧರ್ಮ, ಬಸವ ತತ್ವದವರು. ಅವರಿಗೆ ಯಾವುದೇ ಧರ್ಮದ ಹಂಗಿಲ್ಲ. ಲಿಂಗಾಯತರು ಬಸವ ಧರ್ಮದಡಿಯೇ ಸಾಗಬೇಕು. ಜೈನ, ಬೌದ್ದ, ಸಿಖ್, ಕ್ರಿಶ್ಚಿಯನ್ ಸೇರಿದಂತೆ ಅನೇಕ ಧರ್ಮಗಳು ಸ್ವತಂತ್ರ ಧರ್ಮವಾಗಿರುವಾಗ ಲಿಂಗಾಯತ ಧರ್ಮವೇಕೆ ಸ್ವತಂತ್ರ ಧರ್ಮವಾಗಬಾರದು ಎಂದು ಪ್ರಶ್ನಿಸಿದ ಅವರು, ಲಿಂಗಾಯತರ ಅಭಿವೃದ್ಧಿಗಾಗಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಲೇಬೇಕು ಎಂದು ಪ್ರತಿಪಾದಿಸಿದರು.
ಸಾಹಿತಿ ಬಾಣೂರು ಚೆನ್ನಪ್ಪ ಮಾತನಾಡಿ, ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗುವುದರಿಂದ ಲಿಂಗಾಯತರು ಅಲ್ಪಸಂಖ್ಯಾತರಾಗುತ್ತಾರೆ. ಅದರಿಂದಾಗಿ ಅಲ್ಪಸಂಖ್ಯಾತರಿಗೆ ಸಿಗುವ ಸರಕಾರದ ಎಲ್ಲ ಸವಲತ್ತುಗಳೂ ದೊರೆಯುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಡಾಳು ನಿರಂಜನಪೀಠದ ರುದ್ರಮುನಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬಸವ ತತ್ವ ಪ್ರಚಾರಕ ಜಿ.ಎನ್. ಬಸವರಾಜಪ್ಪ, ಕಾಂತಪ್ಪ, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು. ಶೋಭಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ್ ಸ್ವಾಗತಿಸಿದರು. ಜಯಚನ್ನೇಗೌಡ ವಂದಿಸಿದರು.
ಸ್ವತಂತ್ರ ಧರ್ಮವಾಗುವುದಕ್ಕೆ ಇರಬೇಕಾದ ಎಲ್ಲ ರೀತಿಯ ಅರ್ಹತೆಗಳು ಲಿಂಗಾಯತ ಧರ್ಮಕ್ಕೆ ಇರುವುದರಿಂದ ಆ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ನೀಡಬೇಕು. ಅದಕ್ಕಾಗಿ ಬಸವ ಧರ್ಮೀಯರೆಲ್ಲರೂ ಹೋರಾಟ ನಡೆಸಬೇಕು.
- ಗುರುಬಸವ ಸ್ವಾಮೀಜಿ, ವಿರಕ್ತಮಠ, ಪಾಂಡೋಮಟ್ಟಿ
‘ಲಿಂಗಾಯತ ವಿಶ್ವಧರ್ಮ’
ಲಿಂಗಾಯತ ಧರ್ಮದಲ್ಲಿ ಬ್ರಾಹ್ಮಣರಿಂದ ಹಿಡಿದು ದಲಿತರವರೆಗೆ ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರೂ ಇರುವುದರಿಂದ ಅದು ವಿಶ್ವಧರ್ಮವಾಗಿದೆ. ಧರ್ಮಗಳು ಮತ್ತು ಜಾತಿಗಳ ನಡುವಿನ ಕಾದಾಟದಿಂದ ಬೇಸತ್ತ ಭಕ್ತಿ ಭಂಡಾರಿ ಬಸವಣ್ಣನವರು ಜಾತಿ ಪದ್ಧತಿಯನ್ನು ತೊಡೆದು ಹಾಕಲು ಸ್ವತಂತ್ರ ಧರ್ಮವಾಗಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಈ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರೆಯಬೇಕು.-ಜಯಬಸವಾನಂದ ಸ್ವಾಮೀಜಿ







