ಮಾತೃಶ್ರೀ ಯೋಜನೆ ಯಶಸ್ವಿಯಾಗುವಲ್ಲಿ ಅನುಮಾನವಿಲ್ಲ-ಶಕುಂತಳಾ ಶೆಟ್ಟಿ

ಪುತ್ತೂರು, ಅ. 29: ರಾಜ್ಯ ಸರ್ಕಾರ ಗರ್ಭಿಣಿ ಹಾಗೂ ಬಾಣಂತಿಯರ ಸದೃಢ ಆರೋಗ್ಯಕ್ಕಾಗಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೂ ಮಾತೃಶ್ರೀ ಯೋಜನೆ ಯನ್ನು ಜಾರಿಗೊಳಿಸಿದೆ. ಮಗು ಗರ್ಭಾವಸ್ಥೆಯಲ್ಲಿರುವಾಗಲೇ ಪೌಷ್ಠಿಕಾಂಶ ದೊರೆಯಬೇಕು ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದ್ದು, ಅಂಗನವಾಡಿಗೆ ಬಂದು ಆಹಾರ ಸೇವಿಸಲು ಆರಂಭದಲ್ಲಿ ಮಹಿಳೆಯರಿಗೆ ಸ್ವಲ್ಪ ಸಮಸ್ಯೆಯಾದರೂ ಮುಂದಿನ ದಿನಗಳಲ್ಲಿ ಯೋಜನೆ ಸಂಪೂರ್ಣ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿರು.
ಪುತ್ತೂರು ನಗರಸಭಾ ವ್ಯಾಪ್ತಿಯ ಕೆಮ್ಮಿಂಜೆಯ ನೆಕ್ಕಯಲ್ಲಿ ಮಾದರಿ ವಾರ್ಡ್ ರಚನೆಯಡಿ ಜೀರ್ಣೋದ್ಧಾರಗೊಳಿಸಲಾದ ಅಂಗನವಾಡಿ ಕೇಂದ್ರವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳನ್ನು ಕೆ.ಜಿ. ತರಗತಿಗಳಿಗೆ ಸೇರಿಸುವ ಪ್ರಸ್ತುತ ದಿನಗಳಲ್ಲಿ ಅಂಗನವಾಡಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮಾದರಿ ವಾರ್ಡ್ ರಚನೆಗೆ ಮುಂದಾಗಿರುವ ಮರೀಲ್ ಯೂತ್ ಕೌನ್ಸಿಲ್, ಸ್ಥಳೀಯ ನಗರಸಭಾ ಸದಸ್ಯ ಮುಖೇಶ್ ಕೆಮ್ಮಿಂಜೆ ಹಾಗೂ ಊರವರ ಈ ಕಾರ್ಯ ಶ್ಲಾಘನೀಯ ವಾದುದು ಎಂದು ತಿಳಿಸಿದರು.
ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡ್ ಅವರು ಮಾತನಾಡಿ, ನಗರಸಭೆಯಿಂದ ಮಾದರಿ ವಾರ್ಡ್‌ಗಳ ರಚನಾ ಕಾರ್ಯ ನಡೆಯುತ್ತಿದೆ. ಸ್ಥಳೀಯ ನಗರಸಭಾ ಸದಸ್ಯರು ಹಾಗೂ ವಿವಿಧ ಸಂಘಟನೆಗಳು, ಊರವರ ಸಹಕಾರದಿಂದ ಈ ಕಾರ್ಯ ಮಾಡಲಾಗುತ್ತಿದೆ. ನಗರಸಭೆ ವ್ಯಾಪ್ತಿಗೊಳಪಟ್ಟ 37 ಅಂಗನವಾಡಿ ಕೇಂದ್ರಗಳ ಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ಅವುಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ, ನಗರಸಭಾ ಸದಸ್ಯ ಎಚ್. ಮಹಮ್ಮದ್ ಆಲಿ ಅವರು ಮಾತನಾಡಿದರು. ಪುತ್ತೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗ್ಡೆ, ಕೆಮ್ಮಿಂಜೆ ಷಣ್ಮುಖ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಪೂಜಾರಿ, ಉಪತಹಶೀಲ್ದಾರ್ ಶ್ರೀಧರ್ ಕೋಡಿಜಾಲ್, ಮರೀಲ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಪ್ರೊ. ಎಡ್ವಿನ್ ಡಿಸೋಜಾ, ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ, ಜಿಲ್ಲಾ ಅಂಗನವಾಡಿ ಸಂಘದ ಸಲಹೆಗಾರ್ತಿ ಅರುಣಾ ಕುಮಾರಿ, ಶಾಂತಿ ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಹಾಗೂ ಸಿರಿಲ್ ರೋಡ್ರೀಗಸ್ ಮತ್ತಿತರರು ಉಪಸ್ಥಿತರಿದ್ದರು.
ಮರೀಲ್ ಚರ್ಚ್ ಯೂತ್ ಕೌನ್ಸಿಲ್ ಅಧ್ಯಕ್ಷ ಪ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ ಸ್ವಾಗತಿಸಿದರು. ಅಂಗನವಾಡಿ ಸಹಾಯಕಿ ಪ್ರಮೀಳಾ ಸೆರಾವೋ ವಂದಿಸಿದರು. ಯೂತ್ ಕೌನ್ಸಿಲ್ ಸದಸ್ಯ ಅನಿಲ್ ಪಾಸ್ ಕಾರ್ಯಕ್ರಮ ನಿರೂಪಿಸಿದರು.







