20 ನಿಮಿಷ ಚಿರತೆಯೊಂದಿಗೆ ಸೆಣಸಿ ಮಗುವನ್ನು ರಕ್ಷಿಸಿದ ಮಹಿಳೆ

ಭೋಪಾಲ್, ಅ.29: ತನ್ನ ಮೇಲೆ ದಾಳಿ ನಡೆಸಿ ಕೈಯಲ್ಲಿದ್ದ ಮಗುವನ್ನು ಎಳೆದೊಯ್ಯಲು ಪ್ರಯತ್ನಿಸಿದ ಚಿರತೆಯೊಂದಿಗೆ ಬರಿಗೈಯಲ್ಲಿ ಸೆಣಸಿದ ಮಹಿಳೆಯೊಬ್ಬರು ಚಿರತೆಯನ್ನು ಹಿಮ್ಮೆಟ್ಟಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಭೈಸಾಲಿ ಗ್ರಾಮದ 25ರ ಹರೆಯದ ಆಶಾ ಎಂಬ ಮಹಿಳೆ ತನ್ನ ಮಗುವಿನೊಂದಿಗೆ ಶುಕ್ರವಾರ ಸಂಜೆ ವೇಳೆಗೆ ಸಮೀಪದ ಊರಿನಲ್ಲಿರುವ ತನ್ನ ತವರು ಮನೆಗೆ ತೆರಳುತ್ತಿದ್ದಳು. ಗದ್ದೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಸಮೀಪದ ಪೊದೆಯಿಂದ ಚಿರತೆಯೊಂದು ಈಕೆಯ ಮೇಲೆರಗಿದೆ. ಈಕೆ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗ ಸೀರೆಯನ್ನು ಹಿಡಿದೆಳೆದಿದೆ. ಚಿರತೆಯ ಏಟಿಗೆ ತೀವ್ರವಾಗಿ ಗಾಯಗೊಂಡರೂ ಅಂಜದ ಆಶಾ ಬರಿಗೈಯಲ್ಲಿ ಚಿರತೆಯೊಂದಿಗೆ ಸೆಣಸಾಡಿದ್ದಾಳೆ. ಒಂದು ಹಂತದಲ್ಲಿ ಈಕೆ ಕೆಳಗೆ ಬಿದ್ದರೂ ಮಗುವನ್ನು ಚಿರತೆಯ ಬಾಯಿಯಿಂದ ರಕ್ಷಿಸಿದ್ದಾಳೆ. ಅಲ್ಲದೆ ಚಿರತೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿಯುವ ಮೂಲಕ ಅದರ ಪ್ರಯತ್ನವನ್ನು ವಿಫಲಗೊಳಿಸಿದ್ದಾಳೆ. ಸುಮಾರು 20 ನಿಮಿಷ ಚಿರತೆಯೊಂದಿಗೆ ಸೆಣಸಾಡಿದ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಾಗ ಸಮೀಪದ ಹೊಲದಲ್ಲಿದ್ದ ಗ್ರಾಮಸ್ಥರು ಧಾವಿಸಿ ಬಂದಿದ್ದಾರೆ. ಇದನ್ನು ಕಂಡ ಚಿರತೆ ಕಾಲ್ಕಿತ್ತಿದೆ.
ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕ್ರಮಣ ನಡೆಸಿದ ಪ್ರಾಣಿ ಚಿರತೆ ಎಂದು ಖಚಿತವಾಗಿ ಹೇಳುವಂತಿಲ್ಲ. ಈ ಪ್ರದೇಶದಲ್ಲಿ ರಾತ್ರಿ ಗಸ್ತು ತಂಡವನ್ನು ರಚಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಚಿರತೆಯೇ ಆಕ್ರಮಣ ನಡೆಸಿದ್ದು ಎಂದು ಖಚಿತಪಡಿಸಿರುವ ಗ್ರಾಮಸ್ಥರು, ರಾತ್ರಿ ವೇಳೆ ಮನೆಯಿಂದ ಹೊರಬರಲು ಅಂಜಿಕೆಯಾಗುತ್ತಿದೆ ಎಂದು ತಿಳಿಸಿದ್ದಾರೆ.





