ಜನರ ಚಿಂತನೆಗಳನ್ನು ಭೋವಿ ಯುವ ವೇದಿಕೆ ಎತ್ತಿ ಹಿಡಿಯುತ್ತಿದೆ: ಹಿರಿಯ ವಕೀಲ ಶಂಕ್ರಪ್ಪ

ಬೆಂಗಳೂರು, ಅ.29: ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯು ರಾಜ್ಯದಲ್ಲಿ ಜನಸಾಮಾನ್ಯರ ಚಿಂತನೆಗಳನ್ನು ಎತ್ತಿ ಹಿಡಿಯುವ ವೇದಿಕೆಯಾಗಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಶಂಕ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಾಗರಬಾವಿಯಲ್ಲಿರುವ ಕೆ.ಕೆ.ಆರ್ಕೆಡ್ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವ ವೇದಿಕೆಯ ನೂತನ ಕೇಂದ್ರ ಕಚೇರಿ ಉದ್ಘಾಟನೆ ಮತ್ತು ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂಘಟನೆಯಲ್ಲಿ ಎಲ್ಲರೂ ಒಟ್ಟಿಗೆ ಹೋರಾಟದ ಚಿಂತನೆ ನಡೆಸುತ್ತಿರುವುದು ಶ್ಲಾಘನೀಯವಾಗಿದೆ. ಇರುವಂತಹ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ಯುವ ವೇದಿಕೆಯ ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ವಿಚಾರಗಳನ್ನು ನಿಲ್ಲಿಸುವಂತಹದ್ದು ಸಂತೋದ ವಿಷಯವಾಗಿದೆ ಎಂದು ಹೇಳಿದರು.
ವೈಯಕ್ತಿಕ ಆರೋಪಗಳನ್ನು ಮಾಡುವುದನ್ನು ನಾವು ಮೊದಲು ಬಿಡಬೇಕು. ರಾಜ್ಯದಲ್ಲಿರುವ ಯಾವ ಸಂಘಟನೆಗಳು ನಮ್ಮ ವಿರೋಧಿಗಳಲ್ಲ. ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯಿಂದಿರಿ. ಸೈದ್ಧಾಂತಿಕ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುವ ಮೂಲಕ ನಿಮ್ಮ ನೈತಿಕ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಭೋವಿ ಸಮುದಾಯ ಜಗತ್ತಿನಲ್ಲಿ ಯಾವ ಸಮುದಾಯದ ವಿರುದ್ಧವೂ ಸಂಘಟನೆಯಾಗಬಾರದು. ತಮ್ಮ ಹಕ್ಕುಗಳನ್ನು ಪಡೆಯುವ ಸಲುವಾಗಿ ಒಗ್ಗಟ್ಟನ್ನು ಮೂಡಿಸಬೇಕು. ಇತರ ಎಲ್ಲ ಜಾತಿಗಳೊಂದಿಗೆ ಭೋವಿ ಸಮುದಾಯ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಯಿಂದಿದ್ದು, ಇತರ ಸಮಾಜಗಳೊಂದಿಗೆ ಗುರುತಿಸಲ್ಪಟ್ಟಿದೆ. ಸಮಾಜದ ಸಂಘಟನೆ ಇನ್ನೊಬ್ಬರ ಹಕ್ಕುಗಳನ್ನು ಕಿತ್ತುಕೊಳ್ಳುವಂತಾಗಬಾರದು ಎಂದು ಹೇಳಿದರು.
ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಹಿರಿತನ ಎನ್ನುವುದು ಯೋಗ ಮತ್ತು ಯೋಗ್ಯತೆಯಿಂದ ಬರುತ್ತದೆ. ಕೊಟ್ರೇಶ್‌ರವರು ದೋಣಿಯಲ್ಲಿ ನಾವಿಕನಂತೆ ಕಾಯಕ ನಿರ್ವಹಿಸುತ್ತಿದ್ದಾರೆ. ಕೆಲವರು ಆ ದೋಣಿಯಿಂದ ದುಮುಕುತ್ತಿದ್ದಾರೆ. ಆದರೆ, ದೋಣಿ ನಿಲ್ಲದೆ ಬಹಳ ಸ್ಪಷ್ಟವಾಗಿ ದೋಣಿ ಸಂಚರಿಸುತ್ತಿದೆ. ಆ ದೋಣಿಯು ಯಾವ ದಂಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದರು.
ಮನುಷ್ಯನ ಜೀವನದಲ್ಲಿ ಸ್ವಾಭಿಮಾನ, ಒಳ್ಳೆಯ ಮನಸ್ಸು, ಹೃದಯವಿದ್ದಾಗ ಆಗ ಮನುಷ್ಯನಿಗೆ ಯೋಗ್ಯತೆ ಬರುತ್ತದೆ. ನಿಸ್ವಾರ್ಥ ಮನೋಭಾವನೆಯಿಂದ ಕಾಯಕ ನಿರ್ವಹಿಸಿದಾಗ ಮಾತ್ರ ಅದು ಸ್ವಾಭಿಮಾನ ಎನಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ಮೀಸಲಾತಿ ಎನ್ನುವುದು ನಮ್ಮ ಹಕ್ಕು ಈ ಹಕ್ಕನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಯೋಗ್ಯತೆ ಎನ್ನುವುದು ಸದಾಕಾಲ ನಮ್ಮನ್ನು ಗುರುತಿಸುವಂತೆ ಮಾಡುತ್ತದೆ. ಈ ಯೋಗ್ಯತೆಯನ್ನು ಸಂಪಾದಿಸುವುದರ ಮಟ್ಟಿಗೆ ಸ್ವಾಭಿಮಾನ ಬಹಳ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಭೋವಿ ಯುವ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಲ್.ಗಂಗಾಧರಪ್ಪ, ಉದ್ಯಮಿಗಳಾದ ಕೋಲಾರ ಕೇಶವ, ಮುನಿರಾಜು, ಸಂಜಯ್‌ಕುಮಾರ್, ಭೀಮಣ್ಣ ಮತ್ತಿತರರು ಉಪಸ್ಥಿತರಿದ್ದರು.







