‘ಬಂಜಾರ’ ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಿ: ಡಾ.ಬಂಜಗೆರೆ ಜಯಪ್ರಕಾಶ್

ಬೆಂಗಳೂರು, ಅ. 29: ಟಿಪ್ಪು ಸುಲ್ತಾನ್ ಸಾಮ್ರಾಜ್ಯ ಸೇರಿ ಇತರೆ ಭಾರತೀಯ ಸಾಮ್ರಾಜ್ಯಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿದ್ದ ‘ಬಂಜಾರ’ ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಸೇರ್ಪಡಿಸುವ ಅವಶ್ಯಕತೆ ಇದೆ ಎಂದು ಹಿರಿಯ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಪ್ರತಿಪಾದಿಸಿದ್ದಾರೆ.
ರವಿವಾರ ಶಾಸಕರ ಭವನ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಹಮ್ ಗೋರ್ ಕಟಮಾಳೊ ಆಯೋಜಿಸಿದ್ದ ರಾಜ್ಯ ಮಟ್ಟದ ಚಿಂತನಾ ಸಮಾವೇಶದಲ್ಲಿ ಭಾಗವಹಿಸಿ ಬಂಜಾರ ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಸೇರ್ಪಡಿಸುವ ಕುರಿತು ಅವರು ವಿಷಯ ಮಂಡನೆ ಮಾಡಿದರು.
ಬಂಜಾರ(ಲಂಬಾಣಿಯರು)ರು ಭಾರತದ ಮೂಲ ನಿವಾಸಿಗಳಾಗಿದ್ದು, ಬ್ರಿಟಿಷರನ್ನು ಎದುರು ಹಾಕಿಕೊಂಡೆ ಟಿಪ್ಪು ಸುಲ್ತಾನ್ ಸಾಮ್ರಾಜ್ಯ ಸೇರಿ ಇತರೆ ಭಾರತೀಯ ಸಾಮ್ರಾಜ್ಯಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಿದ್ದರು. ಹೀಗಾಗಿ, ಬಂಜಾರ ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಸೇರ್ಪಡಿಸಿ ಭಾಷೆಯ ಉಳಿವು-ಬೆಳವಣಿಗೆಗೆ ದಾರಿ ಮಾಡಿಕೊಡಬೇಕು ಎಂದು ಹೇಳಿದರು.
ಇಂಗ್ಲಿಷ್ ಐರೋಪ್ಯ ದೇಶಗಳ ಭಾಷೆ, ಹಿಂದಿ ರಾಷ್ಟ್ರ ಭಾಷೆ ಅಲ್ಲ, ಸಂಸ್ಕೃತ ಯಾರ ಭಾಷೆಯೂ ಅಲ್ಲ. ಆದರೂ ಸಂಸ್ಕೃತ ವಿವಿ ಸ್ಥಾಪನೆ, ಸಂಸ್ಕೃತ ಪಾಠ ಶಾಲೆಗಳನ್ನು ಸ್ಥಾಪಿಸಿದ್ದಾರೆ. ಹೀಗಾಗಿ, ಕನ್ನಡದ ಸಹೋದರ ಭಾಷೆಯಾದ ಬಂಜಾರ ಭಾಷೆಯನ್ನೂ ಸಂವಿಧಾನದ 8ನೆ ಪರಿಚ್ಛೇದದಲ್ಲಿ ಸೇರ್ಪಡಿಸಿ ಮಾನ್ಯತೆ ನೀಡಬೇಕೆಂದು. ಹಾಗೂ ಬಂಜಾರ ಸಾಹಿತ್ಯ ಅಕಾಡಮಿ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಸರಕಾರ ಈಗಾಗಲೇ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿದೆ. ಅಲ್ಲದೆ, ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ಕಲಿತರೇ ಮಾತ್ರ ಉತ್ತಮ ಭಾಷಾಂತರಿಗಳು ಆಗಲು ಸಾಧ್ಯವಿದೆ. ಇಲ್ಲದಿದ್ದರೆ ಅವರು ಉತ್ತಮ ಭಾಷಾಂತರಿಗಳು ಆಗುವುದಿಲ್ಲ. ಈಗಲೂ ಜಪಾನ್, ರಷ್ಯಾ ಸೇರಿ ಇತರೆ ದೇಶಗಳಲ್ಲಿ ಮಾತೃಭಾಷೆಯಲ್ಲೆ ಶಿಕ್ಷಣ ನೀಡುತ್ತಿದ್ದಾರೆ. ಭಾರತದ ಬೇರೆ ರಾಜ್ಯಗಳಲ್ಲಿ ಸಹೋದರ ಭಾಷೆಗಳನ್ನು ಮಾತನಾಡುವವರು ಹತ್ತು ಲಕ್ಷ ಜನರಿದ್ದರೆ ಸಾಕು ಆ ಭಾಷೆಯನ್ನು ಸಂವಿಧಾನದಲ್ಲಿ ಸೇರ್ಪಡಿಸುತ್ತಾರೆ ಎಂದರು.
ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಮಾತನಾಡಿ, ಕರ್ನಾಟಕ ಸೇರಿದಂತೆ ದೇಶದಲ್ಲಿ 6 ಕೋಟಿಗೂ ಹೆಚ್ಚು ಬಂಜಾರ ಜನಾಂಗದವರಿದ್ದು, ಈಗಾಗಲೇ ಹಂಪಿ ಹಾಗೂ ಕಲಬುರಗಿ ವಿವಿಯಲ್ಲಿ ಬಂಜಾರ ಅಧ್ಯಯನ ಪೀಠ ಹಾಗೂ ಕಟ್ಟಡಗಳನ್ನು ಸ್ಥಾಪಿಸಿದ್ದಾರೆ. ದೇಶದಲ್ಲಿ ದುಡಿಯುವ ದಿನಗಳಿಗಿಂತಲೂ ರಜೆ ದಿನಗಳೆ ಹೆಚ್ಚಾಗಿದ್ದು, ಈ ಎಲ್ಲ ರಜಾ ದಿನಗಳನ್ನೂ ತೆಗೆದು ಹಾಕಿ ವರ್ಷಕ್ಕೆ ಆ.15 ಮತ್ತು ಅಕ್ಟೋಬರ್ 2ರಂದು ಮಾತ್ರ ರಜೆ ನೀಡಬೇಕೆಂದು ಹೇಳಿದರು.
ದಲಿತ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಬಂಜಾರ ಭಾಷೆ ಇವತ್ತು ಅಳಿವು-ಉಳಿವಿನ ನಡುವೆ ಒದ್ದಾಡುತ್ತಿದೆ. ಒಂದು ಭಾಷೆಗೆ ಹಲವು ಐಡೆಂಟಿಟಿಗಳಿರುತ್ತವೆ. ಬಂಜಾರ ಭಾಷೆಯ ಜೊತೆ ಬಂಜಾರ ಜನಾಂಗದ ಕಲೆ, ಸಂಸ್ಕೃತಿ ಅಡಗಿದೆ. ಬಂಜಾರ ಭಾಷೆಗೆ ಅಕಾಡಮಿ ಆಗಬೇಕು. ಬಂಜಾರ ವಿಶ್ವವಿದ್ಯಾನಿಲಯ ಆಗಬೇಕಿದೆ. ವಿವಿಯಾದರೆ ಶಿಕ್ಷಣ ನೀಡಲು ಸಹಾಯವಾಗುತ್ತದೆ. ಶಿಕ್ಷಣದಿಂದ ಮಾತ್ರ ತುಳಿತಕ್ಕೊಳಗಾದ ಸಮುದಾಯಗಳು ಅಭಿವೃದ್ಧಿಯಾಗಲು ಸಾಧ್ಯ. ಹೀಗಾಗಿ, ಪ್ರಭುತ್ವಗಳು ಬಂಜಾರ ಸಮುದಾಯದ ಸಂವಿಧಾನ ಬದ್ಧ ಹಕ್ಕನ್ನು ಈಡೇರಿಸಬೇಕು ಎಂದರು.
ಹೈದರಾಬಾದ್ ಸೆಂಟ್ರಲ್ ವಿವಿ ಪ್ರಾಧ್ಯಾಪಕ ಡಾ.ಭಾಂಗ್ಯಾ ಭೂಕ್ಯಾ ಮಾತನಾಡಿ, ಬಂಜಾರರ ನಿಜ ಇತಿಹಾಸವನ್ನು ಹೇಳುವ ಮುಖಾಂತರ ನಾವು ಬಂಜಾರ ಭಾಷೆಯನ್ನು ಸಂವಿಧಾನದ 8 ಪರಿಚ್ಛೇದಕ್ಕೆ ಸೇರಿಸುವುದು ಬಹಳ ಮುಖ್ಯ. ಇದಕ್ಕೆ ಪೂರಕವಾಗಿ ಬಂಜಾರ ಭಾಷೆಯಾದ ಗೋರ್ ಬೋಲಿಯನ್ನು ಮಾತೃಭಾಷೆಯಾಗಿ ಬರೆಸಬೇಕಿದೆ. ಅಲ್ಲದೆ, ಸಣ್ಣ ಸಮುದಾಯಗಳು ಮಾತನಾಡುವ ಭಾಷೆಗಳಿಗೂ ಸಂವಿಧಾನಿಕ ಮನ್ನಣೆ ನೀಡಬೇಕು. ಅದಕ್ಕೆ ಪೂರಕವಾಗಿ ತಳಸಮುದಾಯಗಳಾದ ಬಂಜಾರರು ಸಂಘಟಿತರಾಗಬೇಕಿದೆ ಎಂದು ಕರೆ ನೀಡಿದರು..
ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯ್ಕ, ಪ್ರೊ.ಪ್ರದೀಪ್ ರಾಮಾವತ್, ಡಾ.ಹರೀಶ್ ನಾಯ್ಕೊ, ವಕೀಲ ಅನಂತ್ ನಾಯ್ಕೊ, ನಾಗರಾಜ್ ನಾಯ್ಕೊ ಸೇರಿದಂತೆ ಸಮುದಾಯದ ಹಲವು ಗಣ್ಯರು ಪಾಲ್ಗೊಂಡಿದ್ದರು.
ಸಮಾವೇಶ ನಿರ್ಣಯಗಳು:‘ಬಂಜಾರ ಅಕಾಡಮಿಗಾಗಿ ಒತ್ತಾಯಿಸಿ ನವೆಂಬರ್ ಮೊದಲ ವಾರ ರಾಜ್ಯದ ಎಲ್ಲ ಶಾಸಕರಿಗೆ ಮನವಿ ಸಲ್ಲಿಸುವುದು. ಬಂಜಾರ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗಾಗಿ ಒತ್ತಾಯಿಸಿ ನವೆಂಬರ್ ತಿಂಗಳಿನಲ್ಲಿ ರಾಜ್ಯದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಾವೇಶ, ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಭೂ ಸುಧಾರಣೆ ತಿದ್ದುಪಡಿ ಮಸೂದೆಯ ನಿಯಮಗಳನ್ನು ರೂಪಿಸಿ ತಾಂಡ ನಿವಾಸಿಗಳ ಸಂರಕ್ಷಿಸಲು ಆಂದೋಲನ, ಗೋವಾ ಲಂಬಾಣಿಗಳ ಮೇಲಿನ ದಾಳಿಗಳ ಖಂಡನೆ, ಲಂಬಾಣಿಗಳ ರಕ್ಷಣೆಗೆ ಕೇಂದ್ರ-ರಾಜ್ಯ ಸರಕಾರಗಳು ಮಧ್ಯಪ್ರವೇಶಿಸಲು ಒತ್ತಾಯ, ತಾಂಡಗಳ ಸ್ಥಿತಿಗಳ ಸಮೀಕ್ಷೆ ನಡೆಸಬೇಕು.’







