ಮೂರೂವರೆ ವರ್ಷಗಳಲ್ಲಿ ಒಂದೇ ಒಂದು ಜನಪರ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಜಾರಿಗೆ ತಂದಿಲ್ಲ
ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ತಿರುಗೇಟು

ಮೈಸೂರು, ಅ.29: ಅಭಿವೃದ್ಧಿ ಪರ ಇರುವವರು ಯಾರು ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ತಾನು ಹೇಳಿದ ಒಂದೇ ಒಂದು ಜನಪರ ಕಾರ್ಯಕ್ರಮವನ್ನು ಕೇಂದ್ರ ಸರಕಾರ ಜಾರಿಗೆ ತಂದಿಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ಹೇಳಿಕೆ ನೀಡಿದ ಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ರವಿವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆಯ ಅಭಿವೃದ್ಧಿ ಪರ ಯಾರಿದ್ದಾರೆ ಹಾಗೂ ಜನರಿಗಾಗಿ ಕೆಲಸ ಮಾಡದವರು ಯಾರು ಎಂಬುದನ್ನು ಜನರು ಗಮನಿಸುತ್ತಿದ್ದಾರೆ. ಕೇಂದ್ರ ಸರಕಾರ ರಾಜ್ಯದ ರೈತರ ಸಾಲ ಮನ್ನಾ ಮಾಡಿದೆಯೇ? ಬರಗಾಲ ಸಂದರ್ಭದಲ್ಲಿ ರೈತರಿಗೆ ವಿಶೇಷ ನೆರವು ಒದಗಿಸಿದೆಯೇ? ಬಡವರಿಗಾಗಿ ಏನಾದರು ಕಾರ್ಯಕ್ರಮ ಮಾಡಿದೆಯೇ? ನೋಟು ಅಮಾನ್ಯೀಕರಣದಿಂದ ದೇಶಕ್ಕೆ ಏನಾದರೂ ಅನುಕೂಲವಾಯಿತೇ? ಹೊರ ದೇಶದಿಂದ ಕಪ್ಪು ಹಣ ಬಂತೆ? ದೇಶದಲ್ಲಿ ಎರಡು ಕೋಟಿ ಉದ್ಯೋಗ ಸೃಷ್ಟಿ ಆಗಿದೆಯೇ? ಎಂದು ಪ್ರಧಾನಿ ನರೇದ್ರ ಮೋದಿ ಅವರ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.
ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ಕ್ಷೀರ ಧಾರೆ, ವಿದ್ಯಾ ಸಿರಿ, ಸಾಲ ಮನ್ನಾ, ಆರೋಗ್ಯ ಭಾಗ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಆದರೆ ಕೇಂದ್ರ ಸರಕಾರ ಏನು ಮಾಡಿದೆ? ರಾಜ್ಯದಲ್ಲಿ ಇದೇ ಬಿಜೆಪಿ ಅಧಿಕಾರ ನಡೆಸಿದಾಗ ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೊಳಿಸಿದೆಯೇ ಎಂದು ಪ್ರಶ್ನಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ನಮಗೆ ದುರಹಂಕಾರ ಬರಲು ಹೇಗೆ ಸಾಧ್ಯ. ಇದ್ದಕ್ಕಿದ್ದಂತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರಿಗೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಜಾತ್ಯತೀತ ತತ್ವದಲ್ಲಂತೂ ನಂಬಿಕೆ ಇಲ್ಲವೇ ಇಲ್ಲ. ಬಿಜೆಪಿಯವರು ಸಂವಿಧಾನಕ್ಕೆ ಸದಾ ವಿರುದ್ಧ ಎಂದು ಕಿಡಿಕಾರಿದರು.
ಬಿಜೆಪಿಯವರಿಗೆ ಬಡವರ ಪರವಾದ ಕಾರ್ಯಕ್ರಮಗಳು ಬೇಕಾಗಿಲ್ಲ. ಬದಲಾಗಿ ಅವರು ಜನತೆಗೆ ಹಿಂದುತ್ವ, ಹಿಂದೂ ರಾಷ್ಟ್ರ ನಿರ್ಮಾಣದ ಬಗ್ಗೆ ಪ್ರತಿಪಾದಿಸುತ್ತಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಲ್ಲವೆ ಎಂದು ಪ್ರಶ್ನಿಸಿದ ಅವರು, ಜಾತ್ಯಾತೀತತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವಕ್ಕೆ ಹಾಗೂ ಸಂವಿಧಾನದ ಮೌಲ್ಯಗಳಿಗೆ ಕಾಂಗ್ರೆಸ್ ಸದಾ ಬದ್ಧ ಎಂದು ಹೇಳಿದರು.
ನಾವು ವಿಧಾನ ಮಂಡಲ ಅಧಿವೇಶನ ನಡೆಸುವುದು ರಾಜ್ಯದ ಜನರಿಗಾಗಿಯೇ ಹೊರತು ಬಿಜೆಪಿಯವರಿಗಾಗಿ ಅಲ್ಲ. ರಾಜ್ಯದ ಅಭಿವೃದ್ಧಿ ಬಗ್ಗೆ ಕಾಳಜಿ ಇಟ್ಟು ನಾವು ಅಧಿವೇಶನ ಕರೆಯುತ್ತೇವೆ. ಆದರೆ, ಬಿಜೆಪಿಯವರು ಇದನ್ನು ಬಹಿಷ್ಕಾರಿಸುತ್ತಾರೆ. ಇದರಲ್ಲೇ ತಿಳಿಯುತ್ತದೆ ಬಿಜೆಪಿಯವರು ಅಭಿವೃದ್ಧಿ ಕಾರ್ಯಗಳಿಗೆ ವಿರುದ್ಧವಾಗಿದ್ದಾರೆ ಎಂದು ಗುಡುಗಿದರು.
ಬಿಜೆಪಿಯವರು ಗಣಪತಿ, ಡಿ.ಕೆ.ರವಿ ಪ್ರಕರಣದಲ್ಲಿ ರಾಜ್ಯ ಸರಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ, ಸಿಬಿಐ ಎಫ್‍ಐಆರ್ ದಾಖಲಿಸುತ್ತಿದ್ದಂತೆ ರಾಜೀನಾಮೆ ಕೊಡಬೇಕಿದ್ದರೆ ಬಿಜೆಪಿಯಲ್ಲಿ ರಾಜೀನಾಮೆ ಪರ್ವವೇ ಶುರುವಾಗಬೇಕಿತ್ತು. ಕೊಲೆ ಯತ್ನದ ಆರೋಪ ಎದುರಿಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅವರನ್ನು ರಾಜೀನಾಮೆ ಕೇಳಬೇಕಲ್ಲವೇ? ಇದಾವುದನ್ನು ಮಾಡದೇ ಜಾರ್ಜ್ ಅವರ ರಾಜೀನಾಮೆ ಕೇಳಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಬಿಜೆಪಿ ವಿರುದ್ಧ ಸಿಎಂ ಹರಿಹಾಯ್ದರು.
ಜಾರ್ಜ್ ಅವರು ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಮೊದಲಿನಿಂದಲೂ ಬಿಜೆಪಿಯವರು ಅವರನ್ನು ಗುರಿ ಮಾಡಿಕೊಂಡಿದ್ದಾರೆ.
ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಒಂದೇ ಒಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಿಲ್ಲ. ಈಗ ಕೇಂದ್ರದಲ್ಲಿ ತಮ್ಮದೇ ಪಕ್ಷ ಆಡಳಿತ ನಡೆಸುತ್ತಿರುವುದರಿಂದ ಗಣಪತಿ ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತ್ ಚುನಾವಣೆ ರಾಜ್ಯ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಲ್ಲೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ವಿಜಯಶ್ರೀಪುರ ವಿಚಾರ ಸುಪ್ರೀಂ ಕೋರ್ಟ್ ಆದೇಶದಂತೆ ಮಾಲಕರ ಹೆಸರಿಗೆ ಡಿನೋಟಿಫೈ ಮಾಡಿ, ಮನೆ ಮಾಲಕರಿಗೆ ವಿತರಣೆ ಮಾಡುವ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಬಿಜೆಪಿ ಮುಳುಗುತ್ತಿರುವ ಹಡಗು, ಆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲಾ ಅನ್ನೋದು ಗೊತ್ತಾಗುತ್ತಿದೆ. ಗುಜರಾತ್ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್‌ನ ಹಲವು ಶಾಸಕರು ನಮ್ಮ ಪಕ್ಷ ಸೇರಲಿದ್ದಾರೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ರಾತ್ರಿ ಕಂಡ ಬಾವಿಗೆ ಹಗಲು ಯಾರಾದರೂ ಬೀಳುವರೇ? ಬಿಜೆಪಿ ರಾಜ್ಯದಲ್ಲಿ ಮುಳುಗುತ್ತಿರುವ ಹಡಗು. ಹೀಗಿರುವಾಗ ಆ ಪಕ್ಷಕ್ಕೆ ಯಾರು ಹೋಗುತ್ತಾರೆ ಎಂದು ಟೀಕಿಸಿದರು.
ಗುಜರಾತ್ ನಲ್ಲಿ ವ್ಯಾಪಾರಿಗಳು, ಪಟೇಲ್ ಸಮುದಾಯ ಸೇರಿದಂತೆ ಎಲ್ಲ ವರ್ಗದವರೂ ಬಿಜೆಪಿಗೆ ವಿರುದ್ಧವಾಗಿದ್ದಾರೆ. ಇವರಲ್ಲಿ ಟನ್ ಗಟ್ಟಲೇ ಹಣ ಇರುವುದರಿಂದ ಅದನ್ನು ಖರ್ಚು ಮಾಡಿ ಗೆಲುವು ಸಾಧಿಸಬಹುದು ಎಂದು ಬಿಜೆಪಿ ನಾಯಕರು ಭಾವಿಸಿದ್ದಾರೆ. ಬಿಜೆಪಿಗೆ ಹಣದ ಸಮಸ್ಯೆ ಇಲ್ಲ. ಅಂಬಾನಿ, ಅದಾನಿ ಎಲ್ಲ ಅವರ ಜತೆಗೆ ಇದ್ದಾರೆ ಎಂದು ವ್ಯಂಗ್ಯವಾಡಿದರು.







