ಮೃತಪಟ್ಟ 65 ಸಾವಿರ ಮಂದಿಗೆ ವೃದ್ಧಾಪ್ಯ ಪಿಂಚಣಿ !
ಪಂಜಾಬ್‌ನಲ್ಲಿ 10 ವರ್ಷಗಳಿಂದ ನಡೆಯುತ್ತಿದೆ ಹಗರಣ

ಅಮೃತಸರ, ಅ.29: ಮೃತಪಟ್ಟವರ ಹೆಸರಿನಲ್ಲಿ ವೃದ್ಧಾಪ್ಯ ಪಿಂಚಣಿ ಸೌಲಭ್ಯದ ದುರುಪಯೋಗ ನಡೆಯುತ್ತಿರುವ ಆಘಾತಕಾರಿ ಅಂಶ ಪಂಜಾಬ್‌ನಲ್ಲಿ ಬೆಳಕಿಗೆ ಬಂದಿದೆ. ಕಳೆದ ಹತ್ತು ವರ್ಷದಿಂದ ನಡೆಯುತ್ತಿದ್ದ ಕೋಟ್ಯಂತರ ರೂಪಾಯಿ ಮೊತ್ತದ ಪಿಂಚಣಿ ಹಗರಣದ ಬಗ್ಗೆ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್ ತನಿಖೆಗೆ ಆದೇಶಿಸಿದ್ದಾರೆ. ಹಗರಣದ ಬಗ್ಗೆ ಈ ಹಿಂದಿನ ಪ್ರಕಾಶ್‌ಸಿಂಗ್ ಬಾದಲ್ ನೇತೃತ್ವದ ಶಿರೋಮಣಿ ಅಕಾಲಿದಳ-ಬಿಜೆಪಿ ನೇತೃತ್ವದ ಸರಕಾರಕ್ಕೆ ತಿಳಿದಿದ್ದರೂ ಮತಬ್ಯಾಂಕ್‌ನ ಮೇಲೆ ಕಣ್ಣಿಟ್ಟಿದ್ದ ಸರಕಾರ ಮೌನವಹಿಸಿತ್ತು ಎಂದು ಆರೋಪಿಸಲಾಗಿದೆ.
ಕನಿಷ್ಟ 65,743 ಮೃತಪಟ್ಟ ನಾಗರಿಕರ ಹೆಸರಿನಲ್ಲಿ ಪಿಂಚಣಿ ಹಣದ ದುರುಪಯೋಗ ನಡೆಯುತ್ತಿದ್ದು ಇವರಲ್ಲಿ 45,128 ಪಿಂಚಣಿದಾರರು ಸುಳ್ಳು ವಿಳಾಸ ತಿಳಿಸಿರುವುದು ಇದೀಗ ದೃಢಪಟ್ಟಿದೆ. ಸುಮಾರು ಹತ್ತು ವರ್ಷದಿಂದ ಈ ಹಗರಣ ನಡೆಯುತ್ತಿದೆ ಎನ್ನಲಾಗಿದೆ.
ಪಂಜಾಬ್‌ನಲ್ಲಿ ಒಟ್ಟು 19.80 ಲಕ್ಷ ಮಂದಿ ವೃದ್ಧಾಪ್ಯ ಪಿಂಚಣಿ ಯೋಜನೆಯಡಿ ಮಾಸಿಕ 500 ರೂ. ಪಿಂಚಣಿ ಪಡೆಯುತ್ತಿದ್ದು ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಈ ಪಟ್ಟಿಯ ಪುನರ್‌ಪರಿಶೀಲನೆ ಪ್ರಕ್ರಿಯೆ ನಡೆದಿದೆ. ಇದರಲ್ಲಿ 2,45,953 ನಕಲಿ ಪಿಂಚಣಿದಾರರು ಎಂಬುದು ತಿಳಿದು ಬಂದಿದೆ. ಬಹುತೇಕ ನಕಲಿ ಪಿಂಚಣಿದಾರರು ಯುವಜನರು. ಇವರಲ್ಲಿ ಹೆಚ್ಚಿನವರು ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 82,428 ಮಂದಿ ಪುನರ್‌ಪರಿಶೀಲನೆಗೆ ಒಳಪಡಲು ಮುಂದಾಗಲಿಲ್ಲ.
42,437 ಯುವಜನರು, 10,199 ಶ್ರೀಮಂತ ಹಿರಿಯ ನಾಗರಿಕರು ಈ ಯೋಜನೆಯ ಸೌಲಭ್ಯ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪಿಂಚಣಿ ಯೋಜನೆಯಡಿ ಪಂಜಾಬ್ ಸರಕಾರ ಪ್ರತೀ ವರ್ಷ 49.51 ಕೋಟಿ ರೂ. ವೆಚ್ಚ ಮಾಡುತ್ತಿದ್ದು ಇದರಲ್ಲಿ ಅಂಗವಿಲಕರ ಪಿಂಚಣಿ, ವೃದ್ದಾಪ್ಯ ಪಿಂಚಣಿ, ವಿಧವೆಯರ ಪಿಂಚಣಿ ಯೋಜನೆ ಸೇರಿದೆ.
ನಕಲಿ ಪಿಂಚಣಿದಾರರ ಕುಟುಂಬ ವರ್ಗದವರಲ್ಲದೆ ಸರಕಾರಿ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳೂ ಈ ಹಗರಣದಲ್ಲಿ ಶಾಮೀಲಾಗಿದ್ದು ಇವರಿಗೆ ರಾಜಕಾರಣಿಗಳ ಕೃಪಾಕಟಾಕ್ಷವಿತ್ತು ಎಂದು ರಾಜ್ಯ ಸರಕಾರದ ಮೂಲಗಳು ತಿಳಿಸಿವೆ. ಕಳೆದ ಒಂದು ದಶಕದಲ್ಲಿ ಪಿಂಚಣಿ ಯೋಜನೆಯ ಮೂಲಕ 50 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೀಗ ಪಿಂಚಣಿ ಯೋಜನೆಯ 19.80 ಲಕ್ಷ ಫಲಾನುಭವಿಗಳ ದಾಖಲೆಯನ್ನು ಪರಿಶೋಧಿಸಲಾಗುತ್ತಿದೆ. ಆರು ತಿಂಗಳ ಒಳಗೆ ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿಸಲು ರಾಜ್ಯ ಸರಕಾರ ಸೂಚಿಸಿದೆ. ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಈ ಆರ್ಥಿಕ ವರ್ಷಾಂತ್ಯದ ಸಂದರ್ಭ ಸರಕಾರದ ಸಾಲದ ಹೊರೆ 1.9 ಲಕ್ಷ ಕೋಟಿ ರೂ.ಗೆ ತಲುಪುವ ನಿರೀಕ್ಷೆಯಿದೆ. ಆದಾಯ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಸಾಗುತ್ತಿದೆ. ಸರಕಾರಿ ನೌಕರರ ಸಂಬಳ ಪಾವತಿ, ಪಿಂಚಣಿದಾರರಿಗೆ ಪಿಂಚಣಿ ಪಾವತಿಗೆ ಹೆಣಗುತ್ತಿರುವ ರಾಜ್ಯ ಸರಕಾರ ಇದೀಗ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ.
ಬಾದಲ್ ಸರಕಾರಕ್ಕೆ ಮಾಹಿತಿ ಇತ್ತು..?
ಈ ಹಿಂದಿನ ಪ್ರಕಾಶ್ ಸಿಂಗ್ ಬಾದಲ್ ಸರಕಾರಕ್ಕೆ ಈ ಹಗರಣದ ಬಗ್ಗೆ ಮಾಹಿತಿ ಇತ್ತು. ಆದರೆ ಈ ಹಗರಣದ ವ್ಯಾಪ್ತಿ ಅಕಾಲಿದಳದ ಭದ್ರಕೋಟೆಯಾದ ಮಾಲ್ವ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸರಕಾರ ಭಾವಿಸಿತ್ತು ಎನ್ನಲಾಗಿದೆ.
ಪಿಂಚಣಿ ಹಗರಣದ ಬಗ್ಗೆ ತನಿಖೆ ನಡೆಸಬೇಕೆಂಬ ಒತ್ತಾಯವನ್ನು, ತನ್ನ ಮತಬ್ಯಾಂಕ್‌ನ ಸುರಕ್ಷತೆಗಾಗಿ ಬಾದಲ್ ಸರಕಾರ ನಿರಾಕರಿಸಿತ್ತು. ವಿಧಾನಸಭೆ ಚುನಾವಣೆಗೂ ಮುನ್ನವೇ ಈ ಹಗರಣ ಬೆಳಕಿಗೆ ಬಂದಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.







