ಬಿಜೆಪಿ-ಸಂಘಪರಿವಾರದ ಚಿಂತನೆ ಕಪ್ಪುಹಣ, ಭ್ರಷ್ಟಾಚಾರಕ್ಕೆ ಪೂರಕ: ಶಿವಸುಂದರ್

ಬೆಂಗಳೂರು, ಅ. 29: ಕಪ್ಪು ಹಣ, ನಕಲಿ ನೋಟು ಹಾಗೂ ಭ್ರಷ್ಟಾಚಾರದ ಪರವಾಗಿರುವವರು ಬಿಜೆಪಿ ಒಳಗೊಂಡಂತೆ ಸಂಘಪರಿವಾರದ ಸಂಘಟನೆಗಳು ಎಂಬುದನ್ನು ದೇಶದ ಜನತೆಗೆ ಮನವರಿಕೆ ಮಾಡುವ ಅಗತ್ಯವಿದೆ ಎಂದು ಚಿಂತಕ ಶಿವಸುಂದರ್ ಪ್ರತಿಪಾದಿಸಿದ್ದಾರೆ.
ರವಿವಾರ ಬಯಲು ಬಳಗ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ಭಾರತದ ಆರ್ಥಿಕತೆ: ಬಿಕ್ಕಟ್ಟುಗಳು ಮತ್ತು ಸವಾಲುಗಳು’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಬಿಜೆಪಿಯ ಮೂಲ ಸಿದ್ಧಾಂತವೇ ಕಪ್ಪುಹಣ ಹಾಗೂ ಭ್ರಷ್ಟಾಚಾರದ ಪರ. ಹೀಗಿರುವಾಗ ನೋಟು ನಿಷೇಧದಿಂದ ಕಪ್ಪುಹಣ ಪತ್ತೆ ಮಾಡುತ್ತೇವೆಂಬುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ನೋಟು ನಿಷೇಧದಿಂದ ಸರಕಾರದ ಬೊಕ್ಕಸಕ್ಕೆ ನಷ್ಟವಾಯಿತೇ ವಿನಃ ಕಪ್ಪುಹಣ, ನಕಲಿ ನೋಟು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಆಗಿರುವುದರ ಕುರಿತು ಇಲ್ಲಿಯವರೆಗೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಇದರ ಬದಲಾಗಿ ನೋಟು ನಿಷೇಧದಿಂದಾಗಿ ಆರ್‌ಬಿಐಗೆ ಆರ್ಥಿಕ ನಷ್ಟವಾಗಿರುವುದರ ಕುರಿತು ಕೇಂದ್ರ ಸರಕಾರವೇ ಬಹಿರಂಗ ಪಡಿಸಿದೆ ಎಂದು ಅವರು ಅಂಕಿ-ಅಂಶಗಳನ್ನು ನೀಡಿದರು. ದೇಶದಲ್ಲಿ 93ಲಕ್ಷ ಕೋಟಿ ರೂ. ಕಪ್ಪು ಹಣವಿದೆ. ಇಷ್ಟು ಮೊತ್ತದ ಹಣವನ್ನು ಕೇವಲ ನೋಟು ನಿಷೇಧದಿಂದ ಪತ್ತೆ ಮಾಡುತ್ತೇವೆ ಎಂದು ದೇಶದ ಜನತೆಗೆ ಸುಳ್ಳಿನ ಕಂತೆ ಕಟ್ಟಲಾಗುತ್ತಿದೆ. ಆ ಮೂಲಕ ಕಪ್ಪು ಹಣದ ಮೂಲಗಳ ಕುರಿತು ಜನತೆಗೆ ಸತ್ಯ ಮಾರೆ ಮಾಚಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಶೇ.90ರಷ್ಟು ಮಂದಿ ಅಸಂಘಟಿತ ವಲಯದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರೆಲ್ಲರೂ ನಗದು ರೂಪದಲ್ಲಿಯೇ ವ್ಯವಹಾರ ಮಾಡುವವರು. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಯ ಕುರಿತು ಕಿಂಚಿತ್ತೂ ಯೋಚಿಸದ ಪ್ರಧಾನಿ ಮೋದಿ ನೋಟು ನಿಷೇಧ ಮಾಡುವ ಮೂಲಕ ದೇಶದ ಸಾಮಾನ್ಯ ಜನತೆಯನ್ನು ಉಪವಾಸಕ್ಕೆ, ನಿರುದ್ಯೋಗಿಗಳಾಗುವಂತೆ ಮಾಡಿದರು ಎಂದು ಕಿಡಿಕಾರಿದರು.
ಕಪ್ಪು ಹಣಕ್ಕೂ ದೇಶದಲ್ಲಿ ಪ್ರತಿವರ್ಷ ಹೆಚ್ಚಾಗುತ್ತಲೇ ಇರುವ ಹಗರಣಗಳಿಗೂ ನೇರವಾದ ಸಂಬಂಧವಿದೆ ಎಂಬುದು ಆರ್ಥಿಕ ತಜ್ಞರು ಪತ್ತೆ ಹಚ್ಚಿದ್ದಾರೆ. 1960ರಲ್ಲಿ ಕೇವಲ 2ಹಗರಣಗಳು ಮಾತ್ರ ನಡೆದಿತ್ತು. 1990ರಲ್ಲಿ 60 ಹಗರಣಗಳು ಪತ್ತೆಯಾದರೆ 2005ರ ನಂತರದಲ್ಲಿ 250ಹಗರಣಗಳು ನಡೆದಿವೆ. ಈ ಹಗರಣಗಳಲ್ಲಿ ಬಹುತೇಕವಾಗಿ ಬಂಡವಾಳಶಾಹಿಗಳು ಹಾಗೂ ಜನಪ್ರತಿನಿಧಿಗಳೇ ಪ್ರಮುಖ ಆರೋಪಿಗಳಾಗಿರುತ್ತಾರೆ. ಹೀಗಾಗಿ ಹಗರಣಗಳ ಕಡೆಗಿರುವ ಜನತೆಯ ಚಿಂತನೆಯನ್ನು ಬೇರೆ ಕಡೆಗೆ ಸೆಳೆಯಲು ‘ನೋಟು ನಿಷೇಧ’ ಎಂಬ ಮಾಯಾಜಾಲವನ್ನು ಸೃಷ್ಟಿಸಿದ್ದಾರೆಂದು ಲೇವಡಿ ಮಾಡಿದರು.
ಅಂಬಾನಿ, ಅದಾನಿ ಸೇರಿದಂತೆ ದೇಶದಲ್ಲಿರುವ ದೊಡ್ಡ-ದೊಡ್ಡ ಕಂಪೆನಿಗಳು ನ್ಯಾಯಯುತವಾಗಿ ದೇಶಕ್ಕೆ ಬರಬೇಕಾದ ತೆರಿಗೆಯನ್ನು ಕಾನೂನನ್ನು ಬಳಸಿಕೊಂಡೇ ವಂಚಿಸುತ್ತಿದ್ದಾರೆ. ಬಂಡವಾಳಶಾಹಿಗಳಿಗೆ ಪೂರಕವಾದ ಕಾನೂನುಗಳನ್ನು ಜಾರಿ ಮಾಡುವ ಮೂಲಕ ದೇಶದ ಸಂಪತ್ತನ್ನು ದೋಚಲಾಗುತ್ತಿದೆ. ಹೀಗಾಗಿ ಕಪ್ಪು ಹಣವೂ ಬಂಡವಾಳಶಾಹಿಗಳ ಬಳಿ ಬಿಳಿ ರೂಪದಲ್ಲಿಯೇ ಇದೆ. ಇದನ್ನು ಪತ್ತೆ ಮಾಡುವ ಬದಲು ಸಾಮಾನ್ಯ ಜನರ ಬದುಕಿನ ಮೇಲೆ ಬರೆ ಎಳೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ನಡೆಯುವ ಪ್ರತಿಯೊಂದು ಆರ್ಥಿಕ ನೀತಿಗಳ ಹಿಂದೆ ರಾಜಕೀಯ ಹಿತಾಸಕ್ತಿಗಳು ಅಡಗಿರುತ್ತವೆ. ಹೀಗಾಗಿ ಬಿಜೆಪಿಯ ರಾಜಕೀಯ ಹಿತಾಸಕ್ತಿ ಬಂಡವಾಳಶಾಹಿಗಳಿಗೆ, ಭ್ರಷ್ಟಾಚಾರಕ್ಕೆ, ವೈದಿಕ ಶಾಹಿಗಳಿಗೆ ಪೂರಕ. ಆ ಹಿನ್ನೆಲೆಯಲ್ಲಿ ನೋಡುವುದಾದರೆ ಕೇಂದ್ರ ಸರಕಾರದ ನೋಟು ನಿಷೇಧ, ಜಿಎಸ್ ಟಿ, ಡಿಜಿಟಲೀಕರಣ, ಖಾಸಗೀಕರಣಕ್ಕೆ ಪೂರಕ ಯೋಜನೆಗಳು ಬಂಡವಾಳಶಾಹಿ ಹಾಗೂ ಬ್ರಾಹ್ಮಣಶಾಹಿಗಳಿಗೆ ಪೂರಕ.
-ಶಿವಸುಂದರ್, ಪ್ರಗತಿಪರ ಚಿಂತಕ







