ಮೈಸೂರು ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆ ರದ್ದು: ಕ್ಯಾಂಪಸ್ ಫ್ರಂಟ್ ವತಿಯಿಂದ ಧರಣಿ

ಮಂಗಳೂರು, ಅ. 29: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇದರ ಮಾನ್ಯತೆ ಯುಜಿಸಿ ರದ್ದುಗೊಳಿಸಿ ಎರಡು ವರ್ಷ ಕಳೆದರೂ ಸರಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರದಲ್ಲಿರಿಸಿದೆ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆಎಸ್‌ಒಯು ಮಾಡಿದ ಕೆಲವೊಂದು ತಪ್ಪಿನಿಂದಾಗಿ ಯುಜಿಸಿ ಮಾನ್ಯತೆಯನ್ನು ರದ್ದು ಮಾಡಿದೆ. ಆದರೆ ಕೆಎಸ್‌ಒಯು ಅವರು ತಮ್ಮ ತಪ್ಪಿನ ಅರಿವಾಗಿ ತಾವು ಅನುಮತಿಯಿಲ್ಲದೆ ಪ್ರಾರಂಭಿಸಿರುವ ಕೋರ್ಸ್‌ಗಳನ್ನು ಕೈಬಿಡುವುದಾಗಿ ಹೇಳಿದರೂ ಕೂಡಾ ಯುಜಿಸಿಯು ಅನುಮತಿ ನೀಡುತ್ತಿಲ್ಲ. ಈ ರೀತಿಯ ಧೋರಣೆಯಿಂದ ವಿದ್ಯಾರ್ಥಿಗಳನ್ನು ಬಲಿಪಶುಗಳನ್ನಾಗಿಸುವ ಯುಜಿಸಿಯ ಕ್ರಮವು ಉನ್ನತ ಶಿಕ್ಷಣ ಪಡೆಯುವ ಹಕ್ಕುಗಳನ್ನು ನಿರಾಕರಿಸುವಂತಿದೆ. ಒಂದು ವೇಳೆ ಮುಂದಿನ ತಿಂಗಳೊಳಗೆ ಈ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಹೋರಾಟದ ಸ್ವರೂಪವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಅಥಾವುಲ್ಲಾ, ರಾಜ್ಯಸಮಿತಿ ಸದಸ್ಯ ರಿಯಾಝ್ ಕಡಂಬು, ಪ್ರ.ಕಾರ್ಯದರ್ಶಿ ಮುಹಮ್ಮದ್ ಇಮ್ರಾನ್ ಉಪಸ್ಥಿತರಿದ್ದರು. ಶಾಹುಲ್ ಕಾರ್ಯಕ್ರಮ ನಿರೂಪಿಸಿ , ವಂದಿಸಿದರು.





