ನ.8ಕ್ಕೆ ಕರಾಳ ದಿನಾಚರಣೆಗೆ ಕೆಪಿಸಿಸಿ ನಿರ್ಧಾರ
ನೋಟು ಅಮಾನೀಕರಣ
ಬೆಂಗಳೂರು, ಅ. 29: ನೋಟು ಅಮಾನ್ಯಗೊಂಡು ನ.8ಕ್ಕೆ ಒಂದು ವರ್ಷ ಆಗುತ್ತಿದ್ದು, ಇದರಿಂದ ಸಾಮಾನ್ಯ ಜನರ ಮೇಲೆ ಆದ ದುಷ್ಪರಿಣಾಮಗಳನ್ನು ಖಂಡಿಸಿ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ‘ಕರಾಳ ದಿನಾಚರಣೆ’ಗೆ ಕೆಪಿಸಿಸಿ ತೀರ್ಮಾನಿಸಿದೆ.
ರವಿವಾರ ಇಲ್ಲಿನ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಮೇಲ್ಕಂಡ ನಿರ್ಣಯ ಕೈಗೊಳ್ಳಲಾಗಿದೆ.
2016ರ ನ.8ಕ್ಕೆ ಪ್ರಧಾನಿ ಮೋದಿ 500ರೂ., ಸಾವಿರ ರೂ.ಗಳ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ ಪರಿಣಾಮ ಸಾರ್ವಜನಿಕರು ಹಾಗೂ ಜನ ಸಾಮಾನ್ಯರು ಪರದಾಡುವಂತಾಗಿತ್ತು. ಅಲ್ಲದೆ, ನೂರಕ್ಕೂ ಜನ ಪ್ರಾಣ ಕಳೆದು ಕೊಂಡರು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿದವು.
ನೋಟು ರದ್ದು ಕ್ರಮ ಖಂಡಿಸಿ ಕಾಂಗ್ರೆಸ್ ಹೋರಾಟ ಮಾಡುತ್ತಿದ್ದು, ಇದೇ ನ.8ಕ್ಕೆ ಒಂದು ವರ್ಷವಾಗುತ್ತಿದೆ. ಆಹಿನ್ನೆಲೆಯಲ್ಲಿ ಜನರಿಗೆ ನೋಟು ಅಮಾನೀಕರಣದಿಂದಾಗಿ ಆಗಿರುವ ಅನಾಹುತದ ಬಗ್ಗೆ ಮನವರಿಕೆ ಮಾಡಿಕೊಡಲು ಕರಾಳ ದಿನಾಚರಣೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನ.1ರಿಂದ 30ರ ವರೆಗೆ ಎಲ್ಲ ಪಂಚಾಯ್ತಿ ಮತ್ತು ವಾರ್ಡ್‌ಗಳಲ್ಲಿ ದೀಪ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ತಿಂಗಳಿನಿಂದ ಆರಂಭಗೊಂಡ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸಲು ಪರಮೇಶ್ವರ್ ಸೂಚನೆ ನೀಡಿದ್ದಾರೆ.







