ಅಹ್ಮದಾಬಾದ್‌ನ ಸರಕಾರಿ ಆಸ್ಪತ್ರೆಯಲ್ಲಿ 3 ದಿನಗಳಲ್ಲಿ 18 ನವಜಾತ ಶಿಶುಗಳ ಸಾವು

ಅಹ್ಮದಾಬಾದ್,ಅ.29: ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ 18 ನವಜಾತ ಶಿಶುಗಳು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳ ಕೊರತೆ ಈ ಸಾವುಗಳಿಗೆ ಕಾರಣವೆಂದು ಪ್ರತಿಪಕ್ಷ ಆರೋಪಿಸುವುದರೊಂದಿಗೆ ಇದು ಗುಜರಾತ್‌ನಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ಪೈಕಿ ಒಂಭತ್ತು ಸಾವುಗಳು 24 ಗಂಟೆಗಳ ಕಿರುಅವಧಿಯಲ್ಲಿ ಸಂಭವಿಸಿವೆ.
ಈ ಸಾವುಗಳಿಗೆ ತಮ್ಮ ನಿರ್ಲಕ್ಷ ಕಾರಣವೆನ್ನುವುದನ್ನು ಸರಕಾರ ಮತ್ತು ಆಸ್ಪತ್ರೆಯ ಅಧಿಕಾರಿಗಳು ನಿರಾಕರಿಸಿದ್ದು, ನೈಸರ್ಗಿಕ ಕಾರಣಗಳಿಂದ ಈ ಸಾವುಗಳು ಸಂಭವಿಸಿವೆ ಎಂದು ಪ್ರತಿಪಾದಿಸಿದ್ದಾರೆ.
24 ಗಂಟೆಗಳಲ್ಲಿ ಸಾವನ್ನಪ್ಪಿದ ಒಂಭತ್ತು ಶಿಶುಗಳ ಪೈಕಿ ಐದು ಶಿಶುಗಳನ್ನು ಲುನಾವಾಡಾ, ಸುರೇಂದ್ರ ನಗರ, ಮಾನ್ಸಾ, ವಿರಾಮಗ್ರಾಮ ಮತ್ತು ಹಿಮ್ಮತ್‌ನಗರ ದಂತಹ ದೂರದ ಊರುಗಳಿಂದ ಇಲ್ಲಿಗೆ ತರಲಾಗಿತ್ತು. ಹುಟ್ಟುವಾಗಲೇ ಅತ್ಯಂತ ಕಡಿಮೆ ತೂಕ(ಸುಮಾರು 1.1ಕೆ.ಜಿ)ವಿದ್ದ ಈ ಶಿಶುಗಳು ಹಲವಾರು ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದವು ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಅಹ್ಮದಾಬಾದ್ ಸರಕಾರಿ ಆಸ್ಪತ್ರೆಯಲ್ಲಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕವು 100 ಹಾಸಿಗೆಗಳ ಜೊತೆಗೆ ಎಲ್ಲ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆ. ಹಿರಿಯ ಪ್ರೊಫೆಸರ್‌ಗಳು, ಕಿರಿಯ ನಿವಾಸಿ ವೈದ್ಯರು ಮತ್ತು ಸಾಕಷ್ಟು ಸಂಖ್ಯೆಯಲ್ಲಿ ನರ್ಸ್‌ಗಳು ಸೇರಿದಂತೆ ಎಲ್ಲ ನಿಯೋಜಿತ ಸಿಬ್ಬಂದಿಗಳು ಈ ಘಟಕದಲ್ಲಿ ದಿನದ 24 ಗಂಟೆಯೂ ಕರ್ತವ್ಯದಲ್ಲಿರುತ್ತಾರೆ ಎಂದು ಅಧಿಕಾರಿಯೋರ್ವರು ತಿಳಿಸಿದರು.
ಗರ್ಭಿಣಿಯರಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಗುಜರಾತ್‌ನಲ್ಲಿ ಅತ್ಯಂತ ಕಡಿಮೆ ತೂಕದ ಶಿಶುಗಳ ಜನನಗಳು ಸವಾಲಾಗಿಯೇ ಮುಂದುವರಿದಿದೆ ಎಂದು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಇಲ್ಲಿ ಪ್ರತಿದಿನ ಸರಾಸರಿ ಐದರಿಂದ ಆರು ನವಜಾತ ಶಿಶುಗಳು ಸಾವನ್ನಪ್ಪುತ್ತವೆ ಎಂದು ಆಸ್ಪತ್ರೆಯ ಮೂಲಗಳು ಸುದ್ದಿಗಾರರಿಗೆ ತಿಳಿಸಿದವು. ದೂರದ ಸ್ಥಳಗಳಲ್ಲಿ ದೀಪಾವಳಿ ರಜೆಗಳಿಂದಾಗಿ ವೈದ್ಯರು ಮತ್ತು ಆಸ್ಪತ್ರೆಗಳ ಅಲಭ್ಯತೆಯಿಂದಾಗಿ ಭಾರೀ ಸಂಖ್ಯೆಯಲ್ಲಿ ನವಜಾತ ಶಿಶುಗಳನ್ನು ಈ ಆಸ್ಪತ್ರೆಗೆ ಕರೆತರಲಾಗುತ್ತಿದೆ ಎಂದೂ ಅವು ಹೇಳಿದವು.
ಈ ಸಾವುಗಳಿಗೆ ಕಾರಣಗಳನ್ನು ತಿಳಿದುಕೊಳ್ಳಲು ಆಸ್ಪತ್ರೆಯು ತನಿಖೆಗೆ ಆದೇಶಿಸಿದೆ.
ವೈದ್ಯಕೀಯ ಶಿಕ್ಷಣದ ಉಪನಿರ್ದೇಶಕ ಡಾ.ಆರ್.ಕೆ.ದೀಕ್ಷಿತ್ ಅವರು ತನಿಖಾ ಸಮಿತಿಯ ನೇತೃತ್ವ ವಹಿಸಲಿದ್ದಾರೆ ಎಂದು ಸರಕಾರಿ ಆಸ್ಪತ್ರೆಯ ಅಧೀಕ್ಷಕ ಡಾ.ಪ್ರಭಾಕರ ಪ್ರಕಟಿಸಿದ್ದಾರೆ.
ಈ ಘಟನೆಯು ಚುನಾವಣಾ ಕಾವಿನಲ್ಲಿರುವ ಗುಜರಾತ್‌ನಲ್ಲಿ ರಾಜಕೀಯ ಬಿರುಗಾಳಿಯನ್ನೆಬ್ಬಿಸಿದೆ. ರಾಜ್ಯದಲ್ಲಿಯ ಆರೋಗ್ಯ ರಕ್ಷಣೆ ಸ್ಥಿತಿಯ ಬಗ್ಗೆ ಬಿಜೆಪಿ ಸರಕಾರದ ಹೇಳಿಕೆಗಳನ್ನು ಕಾಂಗ್ರೆಸ್ ಪ್ರಶ್ನಿಸಿದೆ. ರಾಜ್ಯದಲ್ಲಿ ಪರಿಣಾಮಕಾರಿ ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಬಿಜೆಪಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಹಾಗಿದ್ದರೆ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ನವಜಾತ ಶಿಶುಗಳ ಸಾವು ಸಂಭವಿಸಿದ್ದು ಹೇಗೆ? ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರಕಾರದ ಹೇಳಿಕೆಗಳಿಗೂ ವಾಸ್ತವ ಸ್ಥಿತಿಗೂ ಅಜಗಜಾಂತರವಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ದೋಶಿ ಆರೋಪಿಸಿ ದರು.







