ಸ್ವರಾಜ್ ಇಂಡಿಯಾ ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸಲಾಗುವುದು: ದೇವನೂರು ಮಹಾದೇವ

ಮಂಡ್ಯ, ಅ.29: ಗ್ರಾಮ ಮಟ್ಟದಲ್ಲಿ ರಚನಾತ್ಮಕವಾಗಿ ಸಂಘಟನೆ ಮಾಡುವ ಮೂಲಕ ರಾಜಕೀಯ ಕ್ರಾಂತಿ ಮಾಡಲು ಹೊರಟಿದ್ದೇವೆ ಎಂದು ಕರ್ನಾಟಕ ಸರ್ವೋದಯ ಪಕ್ಷದ ಮುಖಂಡ ಹಾಗೂ ಸಾಹಿತಿ ದೇವನೂರ ಮಹಾದೇವ ತಿಳಿಸಿದ್ದಾರೆ.
ನಗರದಲ್ಲಿ ರವಿವಾರ ನಡೆದ ಸ್ವರಾಜ್ ಇಂಡಿಯಾ ಪಕ್ಷದ ಸಮಾಲೋಚನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಕ್ರಾಂತಿ ಮಾಡಲು ಸ್ವರಾಜ್ ಇಂಡಿಯಾ ಪಕ್ಷದಿಂದ ತಳಮಟ್ಟದಿಂದ ಸಂಘಟನೆ ಮಾಡಲು ಮುಂದಾಗಿದ್ದೇವೆ ಎಂದರು.
ದೇಶದಲ್ಲಿ ರಾಜಕೀಯ ತಳಮಳ ಉಂಟಾಗಿದೆ. ಒಂದು ಜಾತಿ, ಧರ್ಮದ ಪರವಾಗಿ ರಾಜಕೀಯ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ದುರಂತ ಎದುರಾಗಲಿದೆ. ಇಂಥ ಸನ್ನಿವೇಶದಲ್ಲಿ ರಾಜಕೀಯ ಕೊಳಕು, ಭ್ರಷ್ಟಾಚಾರ, ಅನ್ಯಾಯವನ್ನು ನಿರ್ಮೂಲನೆ ಮಾಡಿ, ಸಂವಿಧಾನ ಗಟ್ಟಿಗೊಳಿಸುವ ಅಗತ್ಯವಿದೆ. ಅದಕ್ಕಾಗಿ ಪ್ರಾಮಾಣಿಕ ರಾಜಕೀಯ ಪಕ್ಷ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕ ಸರ್ವೋದಯ ಪಕ್ಷವು ಸ್ವರಾಜ್ ಇಂಡಿಯಾ ಪಕ್ಷಕ್ಕೆ ವಿಲೀನಗೊಂಡಿದೆ. ಸ್ವರಾಜ್ ಇಂಡಿಯಾ ಪಕ್ಷವನ್ನು ರಾಜ್ಯಾದ್ಯಂತ ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಾಗುವುದು. ರಾಜ್ಯದಲ್ಲಿರುವ ಎಲ್ಲ ಪ್ರಗತಿಪರ ಸಂಘಟನೆಗಳ ಮುಖಂಡರು, ಬುದ್ಧಿಜೀವಿಗಳು, ವಿಚಾರವಂತರನ್ನು ಸಂಪರ್ಕಿಸಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ವಿವರಿಸಿದರು.
ಸ್ವರಾಜ್ ಇಂಡಿಯಾ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ನಮ್ಮಂತೆಯೇ ಒಂದೇ ಮನಸ್ಥಿತಿ ಇರುವ ಮನಸ್ಸುಗಳನ್ನು ಕೊಂಡೊಯ್ಯಲು ತೀರ್ಮಾನಿಸಲಾಗಿದೆ. ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಸೇರಿದಂತೆ ಎಲ್ಲ ಪ್ರಗತಿಪರ ಸಂಘಟನೆಗಳನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದು ಹೇಳಿದರು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ದೇಶದ ರಾಜಕೀಯವನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸಲಾಗಿದೆ. ಇದನ್ನು ತೊಡೆದು ಹಾಕಿ ಎಲ್ಲ ಪ್ರಗತಿಪರರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದರು.
ಸ್ವರಾಜ್ ಇಂಡಿಯಾದ ರಾಜ್ಯ ಸಂಘಟನಾ ಸಂಚಾಲಕ ಅಮ್ಜದ್ ಪಾಷ, ನಂದಿನಿ ಜಯರಾಂ, ಡಾ.ಚಿಕ್ಕಮರಳಿ ಬೋರೇಗೌಡ, ಶಂಭೂನಹಳ್ಳಿ ಸುರೇಶ್, ನಜೀರ್ ಅಹ್ಮದ್, ದಾದಾಪೀರ್, ಕರುಣಾಕರರೆಡ್ಡಿ, ಹೆಬ್ಬಾಳೆ ಲಿಂಗರಾಜು, ಅಭಿರುಚಿ ಗಣೇಶ್, ರಶ್ಮಿ, ಸಮೀರ್ ಉತ್ಸಾದ್, ಇತರ ಮುಖಂಡರು ಉಪಸ್ಥಿತರಿದ್ದರು.







