ಮೊಗಾದಿಶು: ಟ್ರಕ್‌ಬಾಂಬ್ ದಾಳಿಗೆ 23 ಬಲಿ

ಮೊಗಾದಿಶು,ಅ.29: ಮಾರ್ಚ್‌ನಲ್ಲಿ ಭೀಕರ ಸರಣಿ ಸ್ಫೋಟಗಳಿಂದ ತತ್ತರಿಸಿದ್ದ ಸೊಮಾಲಿಯದ ರಾಜಧಾನಿ ಮೊಗಾದಿಶುವಿನಲ್ಲಿ ಶನಿವಾರ ಮತ್ತೆ ಭಯೋತ್ಪಾದಕರು ರಕ್ತದೋಕುಳಿ ಹರಿಸಿದ್ದಾರೆ.
ಮೊಗಾದಿಶು ನಗರದ ಪ್ರತಿಷ್ಠಿತ ಹೊಟೇಲೊಂದರ ಹೊರಭಾಗದಲ್ಲಿ ಶನಿವಾರ ನಡೆದ ಆತ್ಮಹತ್ಯಾ ಟ್ರಕ್ ಬಾಂಬ್ ದಾಳಿಯಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ನಗರದ ನಾಸಾ-ಹಬ್ಲೋಡ್ ಹೊಟೇಲ್‌ನ ಹೊರಭಾಗದಲ್ಲಿ ಶನಿವಾರ ಸಂಜೆ ಟ್ರಕ್ ಬಾಂಬ್ ಸ್ಫೋಟ ನಡೆದಿದ್ದು, ಆ ಬಳಿಕ ಇನ್ನೆರಡು ಸ್ಫೋಟಗಳು ನಡೆದಿರುವುದಾಗಿ ವರದಿಗಳು ತಿಳಿಸಿವೆ. ಈ ಪೈಕಿ ಓರ್ವ ಭಯೋತ್ಪಾದಕ ತನ್ನನ್ನು ತಾನೇ ಸ್ಫೋಟಿಸಿಕೊಂಡಿದ್ದಾನೆಂದು ಅವು ಹೇಳಿವೆ. ಆತ್ಮಹತ್ಯಾ ದಾಳಿಯ ಬಳಿಕ ಕೆಲವು ಭಯೋತ್ಪಾದಕರು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಹೊಟೇಲ್ ಒಳಗಡೆ ನುಗ್ಗಿದ್ದಾರೆ. ಭದ್ರತಾಪಡೆಗಳು ಇಡೀ ಹೊಟೇಲನ್ನು ಸುತ್ತುವರಿದಿದ್ದು, ಉಗ್ರರೊಂದಿಗೆ ತೀವ್ರ ಗುಂಡಿನ ಕಾಳಗ ಮುಂದುವರಿದಿರುವುದಾಗಿ ವರದಿಗಳು ತಿಳಿಸಿವೆ.
ಘರ್ಷಣೆಯಲ್ಲಿ ಐವರು ದಾಳಿಕೋರರ ಪೈಕಿ ಮೂವರನ್ನು ಹತ್ಯೆಗೈಯಲಾಗಿದೆಯೆಂದು ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಕ್ಯಾಪ್ಟನ್ ಮುಹಮ್ಮದ್ ಹುಸೈನ್ ತಿಳಿಸಿದ್ದಾರೆ. ಕತ್ತಲಲ್ಲಿ ಉಗ್ರರು ಗ್ರೆನೇಡ್‌ಗಳನ್ನು ಎಸೆದು ವಿದ್ಯುತ್ ಸಂರ್ಪಕವನ್ನು ಕಡಿದುಹಾಕಿದ್ದಾರೆಂದು ಅವರು ಹೇಳಿದ್ದಾರೆ.
ನಾಸಾ-ಹಬ್ಲೋಡ್ ಹೊಟೇಲ್‌ನಲ್ಲಿದ್ದ ಸೊಮಾಲಿಯಾದ ಸಚಿವ ಸೇರಿದಂತೆ 30ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆಯೆಂದು ಕ್ಯಾಪ್ಟನ್ ಮುಹಮ್ಮದ್ ತಿಳಿಸಿದ್ದಾರೆ.
ಎರಡುವಾರಗಳ ಹಿಂದೆ ಮೊಗಾದಿಶುವಿನ ಜನದಟ್ಟಣೆಯ ರಸ್ತೆಯೊಂದರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 350 ಮಂದಿ ಸಾವನ್ನಪ್ಪಿದ ಎರಡು ವಾರಗಳ ಬಳಿಕ ಈ ಆತ್ಮಹತ್ಯಾ ದಾಳಿ ನಡೆದಿದೆ.
ನಿನ್ನೆ ನಡೆದ ದಾಳಿಯ ಹೊಣೆಯನ್ನು ಕುಖ್ಯಾತ ಅಲ್-ಶಬಾಬ್ ಭಯೋತ್ಪಾದಕ ಗುಂಪು ವಹಿಸಿಕೊಂಡಿದೆ. ತನ್ನ ಹೋರಾಟಗಾರರು ಹೊಟೇಲ್‌ನೊಳಗಿದ್ದು, ಕಾಳಗವನ್ನು ಮುಂದುವರಿಸಿದ್ದಾರೆಂದು ಅದು ಹೇಳಿದೆ.
ಹೊಟೇಲ್‌ನೊಳಗಡೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೂವರು ಮಕ್ಕಳು ಹಾಗೂ ಓರ್ವ ತಾಯಿಯನ್ನು ಉಗ್ರರು ಹಣೆಗೆ ಗುಂಡಿಕ್ಕಿ ಹತ್ಯೆಗೈದಿದ್ದಾರೆಂದು ಹುಸೈನ್ ತಿಳಿಸಿದ್ದಾರೆ.
ಈ ಮಧ್ಯೆ ಸೊಮಾಲಿಯಾ ಅಧ್ಯಕ್ಷ ಮುಹಮ್ಮದ್ ಅಬ್ದುಲ್ಲಾ ಮುಹಮ್ಮದ್ ಅವರು ಭಯೋತ್ಪಾದಕರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಾರ್ಚ್ 14ರಂದು ಮೊಗಾದಿಶುವಿನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಬಲವಾಗಿ ಪ್ರತಿಭಟಿಸಿದ ಸೊಮಾಲಿಯಾ ನಾಗರಿಕರಲ್ಲಿ ಭಯವನ್ನು ಮೂಡಿಸುವ ಉದ್ದೇಶದಿಂದ ಉಗ್ರರು ಈ ದಾಳಿಯನ್ನು ನಡೆಸಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







