ರಾಜ್ಯಕ್ಕೆ ನರೇಂದ್ರ ಮೋದಿಯವರ ಭೇಟಿಯಿಂದ ರಾಜ್ಯ ರಾಜಕೀಯದ ಮೇಲೆ ಪ್ರಭಾವೇನು ಬೀರುವುದಿಲ್ಲ: ಸಿಎಂ ಸಿದ್ದರಾಮಯ್ಯ
ಮಂಡ್ಯ, ಅ.29: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಮಾತ್ರಕ್ಕೆ ರಾಜ್ಯ ರಾಜಕೀಯದ ಮೇಲೆ ಪ್ರಭಾವವೇನೂ ಬೀರುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಗರದ ಹೊರವಲಯದ ತೂಬಿನಕೆರೆ ಹೆಲಿಪ್ಯಾಡ್‍ನಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬರು ಭೇಟಿ ನೀಡಿದ ಮಾತ್ರಕ್ಕೆ ರಾಜಕೀಯ ಪರಿಸ್ಥಿತಿ ಬದಲಾಗುವುದೆಂಬ ಅನಿಸಿಕೆ ಅರ್ಥಹೀನವೆಂದು ಅಭಿಪ್ರಾಯಪಟ್ಟರು.
ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಆದ್ದರಿಂದ ನಾನು ಹೋಗುವುದಿಲ್ಲ. ಬೆಂಗಳೂರಿಗೆ ಬಂದಾಗ ಸ್ವಾಗತಿಸಲಾಗುವುದು ಎಂದು ಹೇಳಿದ ಅವರು, ನಾವು ನುಡಿದಂತೆ ನಡೆದವರು. ನರೇಂದ್ರ ಮೋದಿಯವರು ವಿದೇಶಗಳಲ್ಲಿರುವ ಕಪ್ಪುಹಣ ವಾಪಸ್ ತರುತ್ತೇನೆ, ಪ್ರತೀ ಮತದಾರನ ಬ್ಯಾಂಕ್ ಖಾತೆಗೆ 15 ಲಕ್ಷ ರೂ.ಜಮೆ ಮಾಡುತ್ತೇನೆ ಎಂದಿದ್ದರು. ಆದರೆ ಅದೆಲ್ಲಾ ಏನಾಯಿತು ಎಂದು ಪ್ರಶ್ನಿಸಿದರು.
ಭಿನ್ನಮತ ಯಾವ ಪಕ್ಷದಲ್ಲಿಲ್ಲ. ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧ ಹಣಕಾಸು ಖಾತೆ ಮಾಜಿ ಸಚಿವ ಯಶವಂತ ಸಿನ್ಹಾ ಟೀಕಿಸಿದ್ದರು. ಅದೇನು ಭಿನ್ನಮತವಲ್ಲವೆ ಎಂದು ಅವರು ಲೇವಡಿ ಮಾಡಿದರು.
ಎಲ್ಲ ರಾಜಕೀಯ ಪಕ್ಷಗಳಂತೆ ನಮ್ಮ ಪಕ್ಷದಲ್ಲೂ ಭಿನ್ನಮತವಿದೆ. ಚುನಾವಣೆ ಸಮೀಪಿಸಿದಾಗ ಎಲ್ಲವೂ ಶಮನಗೊಳ್ಳುತ್ತವೆ. ಪಕ್ಷದ ಮೇಲೆ ಪರಿಣಾಮ ಬೀರುವಂತಿದ್ದರೆ ಅದನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದ ಅವರು, ಮಂಡ್ಯ ವಿಧಾನಸಭೆ ಕ್ಷೇತ್ರದಲ್ಲಿ ಅಂಬರೀಶ್ ಸೇರಿದಂತೆ ಇತರರಿಗೆ ಟಿಕೆಟ್ ಕೊಡುವ, ಬಿಡುವ ವಿಚಾರ ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಷಯ. ಅಭ್ಯರ್ಥಿ ಆಯ್ಕೆಯಲ್ಲಿ ಕಾರ್ಯಕರ್ತರ ಅಭಿಪ್ರಾಯವೂ ಮುಖ್ಯವಾಗುತ್ತದೆ ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಪಕ್ಷ ತ್ಯಜಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದಿಂದ ಆಯ್ಕೆಯಾಗಿದ್ದರೆ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಬಹುದಿತ್ತು ಎಂದು ವ್ಯಂಗ್ಯವಾಡಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪಗೆ ಬುದ್ಧಿ ಇಲ್ಲ. ನಾನು ಅವರಿಂದ ಬುದ್ಧಿ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಪಕ್ಷದಲ್ಲಿ ಹೆಚ್ಚಾಗುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಂದ ಅವರಿಗೆ ಅಭದ್ರತೆ ಕಾಡುತ್ತಿದೆ ಎಂದರು.
ಇಂಧನ ಇಲಾಖೆಯಲ್ಲಿ ಆಗಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸದನ ಸಮಿತಿ ರಚಿಸಲಾಗಿದೆ. ವರದಿ ನನ್ನ ಕೈ ಸೇರಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು. ತಡೆದುಕೊಳ್ಳಲು ಸಾಧ್ಯವಾಗದಿದ್ದರೆ ಮಂಪರು ಪರೀಕ್ಷೆ ಮಾಡಿಸಿಕೊಳ್ಳುವ ಅವರ ಇಚ್ಛೆಗೆ ನನ್ನ ವಿರೋಧವಿಲ್ಲ ಸ್ಪಷ್ಟಪಡಿಸಿದರು.







