ಸಿರಿಯ: ದೇರ್ ಎರೊರ್‌ನಲ್ಲಿ ಭೀಕರ ಕಾಳಗ
ಕನಿಷ್ಠ 73 ಮಂದಿ ಹತ, ಬಹುತೇಕ ಭಾಗಗಳು ಸಿರಿಯ ಸೇನೆ ವಶ

ಬೈರೂತ್,ಅ.29: ಭೀಕರ ಅಂತರ್ಯುದ್ಧಕ್ಕೆ ಸಾಕ್ಷಿಯಾಗಿರುವ ಸಿರಿಯದ ದೇರ್ ಎರೊರ್ ನಗರದಲ್ಲಿ ಸಿರಿಯ ಸೇನೆ ಹಾಗೂ ಐಸಿಸ್ ನಡುವೆ ಭೀಕರ ಕಾಳಗ ಮುಂದುವರಿದಿದ್ದು,ಕಳೆದ 24 ತಾಸುಗಳಲ್ಲಿ ಎರಡೂ ಕಡೆಗಳಿಂದ ಒಟ್ಟು 73 ಮಂದಿ ಹತರಾಗಿದ್ದಾರೆಂದು ಮನವಹಕ್ಕುಗಳ ಕಣ್ಗಾವಲು ಸಮಿತಿಯೊಂದು ರವಿವಾರ ತಿಳಿಸಿದೆ.
ದೇರ್ ಎರೊರ್‌ನ ನಗರದ ಬಹುತೇಕ ಭಾಗಗಳನ್ನು ಸಿರಿಯ ಸೇನೆ ಈಗ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಶನಿವಾರ ಐಸಿಸ್ ಉಗ್ರರು ನಡೆಸಿದ ದಾಳಿಗೆ ಉಗ್ರವಾಗಿ ಪ್ರತಿಕ್ರಿಯೆ ನೀಡಿದ ಸಿರಿಯ ಸೇನೆ ರವಿವಾರ ತನ್ನ ದಾಳಿಯನ್ನು ತೀವ್ರಗೊಳಿಸಿದೆಯೆಂದು ಬ್ರಿಟನ್‌ನಿಂದ ಕಾರ್ಯಾಚರಿಸುತ್ತಿರುವ ಮಾನವಹಕ್ಕುಗಳ ಸಿರಿಯನ್ ಕಣ್ಗಾವಲು ಸಮಿತಿ ವರದಿ ಮಾಡಿದೆ.
ಶನಿವಾರ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 50 ಮಂದಿ ಐಸಿಸ್ ಉಗ್ರರು ಹಾಗೂ 23 ಮಂದಿ ಸಿರಿಯ ಸೈನಿಕರು ಹಾಗೂ ಸರಕಾರಿ ಪರ ಹೋರಾಟಗಾರರು ಸಾವನ್ನಪ್ಪಿರುವುದಾಗಿ ಸಮಿತಿ ತಿಳಿಸಿದೆ.
ದೇರ್ ಎರೊರ್ ನಗರದ ಎರಡು ವಸತಿಪ್ರದೇಶಗಳನ್ನು ಹಾಗೂ ಮುನ್ಸಿಪಲ್ ಕ್ರೀಡಾಂಗಣವನ್ನು ಸರಕಾರಿ ಪಡೆಗಳು ವಶಪಡಿಸಿಕೊಂಡಿರುವುದಾಗಿ ಸಮಿತಿಯ ನಿರ್ದೇಶಕ ರಮಿ ಅಬ್ದೆಲ್ ರಹ್ಮಾನ್ ತಿಳಿಸಿದ್ದಾರೆ. ದೇರ್ ಎರೆರ್ ನಗರ ಹಾಗೂ ಯುಫ್ರಟೈಸ್ ನದಿಯ ನಡುವಿನ ಪ್ರದೇಶದಲ್ಲಿ ಐಸಿಸ್ ಉಗ್ರರು ಈಗ ದಿಗ್ಭಂಧನಕ್ಕೊಳಗಾಗಿದ್ದಾರೆಂದು ಅಬ್ದೆಲ್ ರಹ್ಮಾನ್ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ದೇರ್ ಎರೆರ್ ನಗರ ಐಸಿಸ್ ಉಗ್ರರ ವಶದಲ್ಲಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಸರಕಾರಿ ಪಡೆಗಳು ನಗರಕ್ಕೆ ಮುತ್ತಿಗೆ ಹಾಕಿದ್ದು ಅಲ್ಲಿಂದ ಉಗ್ರರನ್ನು ಉಚ್ಚಾಟಿಸಲು ಶತಾಯಗತಾಯ ಯತ್ನಿಸುತ್ತಿದೆ.
ಇರಾಕ್ ಗಡಿಗೆ ತಾಗಿಕೊಂಡಿರುವ ತೈಲ ಸಮೃದ್ಧ ಪ್ರಾಂತವಾದ ದೇರ್ ಎರೆರ್‌ನಲ್ಲಿ ಈಗ ಐಸಿಸ್ ಉಗ್ರರ ಮೇಲೆ ಒಂದು ಕಡೆಯಿಂದ ಸಿರಿಯನ್ ಪಡೆಗಳು ಹಾಗೂ ಇನ್ನೊಂದೆಡೆ ಅಮೆರಿಕ ಬೆಂಬಲಿತ ಕುರ್ದಿಷ್-ಅರಬ್ ಸಿರಿಯನ್ ಪ್ರಜಾಪ್ರಭುತ್ವವಾದಿ ಪಡೆಗಳು ದಾಳಿ ನಡೆಸುತ್ತಿವೆ. ನೆರೆಯ ರಕ್ಕಾ ಪ್ರಾಂತದಿಂದ ಐಸಿಸ್ ಉಗ್ರರನ್ನು ಈಗಾಗಲೇ ಹಿಮ್ಮೆಟ್ಟಿಸಲಾಗಿದೆ.







