ರಾಜ್ಯ ಸರಕಾರ ಅಹಿಂದ ವರ್ಗಗಳ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ: ಸಿಎಂ ಸಿದ್ದರಾಮಯ್ಯ

ಮಂಡ್ಯ, ಅ.29: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸದೃಢರಾಗುವುದು ಸದ್ಯದ ಅಗತ್ಯ. ಇದು ಸಾಧ್ಯವಾಗಲು ನಾವು ನಿಮ್ಮ ಜೊತೆ ಇದ್ದೇವೆ. ನೀವು ನಮ್ಮೊಂದಿಗೆ ಇರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಕರೆ ನೀಡಿದ್ದಾರೆ.
ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಂದಿನಿಂದಲೂ ತುಳಿತಕ್ಕೊಳಗಾದ ಸಮುದಾಯಗಳನ್ನು ಎಲ್ಲ ರೀತಿಯಿಂದಲೂ ಸಬಲರನ್ನಾಗಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೆ ತರುತ್ತಿದೆ. ಪ್ರತಿಪಕ್ಷಗಳ ಟೀಕೆ, ವಿರೋಧಕ್ಕೆ ತಲೆಬಾಗದೆ ಕೆಲಸ ಮಾಡಿಕೊಂಡು ಬಂದಿದ್ದೇವೆ. ಅಹಿಂದ ವರ್ಗಗಳ ಪರ ನಾನೆಂಬ ಟೀಕೆ ವ್ಯಕ್ತವಾಗುತ್ತಲೇ ಇದೆ. ಈ ಬಗ್ಗೆ ನನಗೆ ಯಾವುದೇ ರೀತಿಯ ಕೀಳರಿಮೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಅಖಿಲ ಕರ್ನಾಟಕ ಅಂಬಿಗರ ಚೌಡಯ್ಯ ಮಹಸಭಾ ಮತ್ತು ಜಿಲ್ಲಾ ಗಂಗಾಮತಸ್ಥ(ಬೆಸ್ತ)ರ ಸಂಘದಿಂದ ರವಿವಾರ ನಗರದಲ್ಲಿ ನಡೆದ ಒಳನಾಡು ಮೀನುಗಾರರ (ಗಂಗಾಮತಸ್ಥರ) ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದುಳಿದ ಪರವೆಂದು ಬೊಬ್ಬೆ ಹೊಡೆಯುವ ಬಿಜೆಪಿ ಕೇಂದ್ರ ಸರಕಾರ ಮಾಡಿದ್ದಾದರೂ ಏನು? ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಪರ ಕಳುಹಿಸಿದ ಶಿಫಾರಸುಗಳನ್ನೆಲ್ಲ ನಿರ್ಲಕ್ಷಿಸಿದ್ದಷ್ಟೇ ಎಂದು ಟೀಕಿಸಿದರು.
ಈ ಸಮುದಾಯದ ಸಂಘಟನೆಗಳು ತಮ್ಮಲ್ಲಿರುವ 39 ಉಪಪಂಗಡಗಳನ್ನು ಪರಿಶಿಷ್ಟ ವರ್ಗಗಳ ಗುಂಪಿಗೆ ಸೇರಿಸಬೇಕೆಂದು ಒತ್ತಾಯಿಸಿದ್ದವು. ರಾಜ್ಯ ಸರಕಾರ ಎರಡು ಬಾರಿ ಶಿಫಾರಸು ಮಾಡಿದೆ. ಮೂರನೇ ಬಾರಿಯೂ ಶಿಫಾರಸು ಮಾಡುತ್ತೇವೆ. ಆದರೆ, ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ನಾವೇನು ಮಾಡಲು ಸಾಧ್ಯವೆಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರ ಅಹಿಂದ ವರ್ಗಗಳ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಸಂಖ್ಯೆ ದೃಷ್ಟಿಯಿಂದ ಹೆಚ್ಚಿದ್ದರೂ ಈವರೆಗೆ ಗಂಗಾಮತಸ್ಥರ ಅಭಿವೃದ್ಧಿಗೆ ನಿಗಮ ಸ್ಥಾಪನೆಯಾಗಿರಲಿಲ್ಲ. ನಮ್ಮ ಸರಕಾರ ಅಂಬಿಗರ ಚೌಡಯ್ಯ ನಿಗಮ ಸ್ಥಾಪಿಸಿದೆ. ಹಾಗೆಯೇ ಗಂಗಾಮತಸ್ಥರ ಕುಲದೈವ ಅಂಬಿಗರ ಚೌಡಯ್ಯ ಗದ್ದುಗೆ ಅಭಿವೃದ್ಧಿಗೆ 32 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.
ಕರಾವಳಿ ಭಾಗದಲ್ಲಿ ಹೆಚ್ಚು ಮೀನುಗಾರಿಕೆ ನಡೆಯುತ್ತದೆ. ಅದರಂತೆ ಒಳನಾಡು ಮೀನುಗಾರರಿಗೆ ರಾಜ್ಯದಲ್ಲಿ ಮೊದಲ ಪ್ರಾಶಸ್ತ್ಯ ನೀಡಲಾಗುವುದು. ಹರಿಯಾಣ ಮತ್ತು ಆಂಧ್ರ ಮಾದರಿಯಲ್ಲಿ ಮೀನುಗಾರರ ನೀತಿ ರಚನೆ ಮಾಡಲಾಗುವುದು. ಮೀನುಗಾರಿಕೆ ವೃತ್ತಿ ಮಾಡುವವರಿಗೆ ಬಂಡವಾಳಶಾಹಿಗಳಿಂದ ಆಗುತ್ತಿದ್ದ ಅನ್ಯಾಯವನ್ನು ತಪ್ಪಿಸಿ ಮೀನುಗಾರರಿಗೆ ಅನುಕೂಲ ಮಾಡಿಕೊಡಲಾಗಿದೆ. ಕೃಷ್ಣರಾಜಸಾಗರ ಜಲಾಶಯ ಭಾಗದಲ್ಲಿನ ಸುಮಾರು 500 ಮಂದಿಗೆ ಪರವಾನಿಗೆ ನೀಡುವ ಮೂಲಕ ಬಂಡವಾಳಶಾಹಿಗಾರರ ಕಪಿಮುಷ್ಠಿಯಿಂದ ಬಿಡುಗಡೆ ಮಾಡಲಾಗಿದೆ. ಮೀನುಗಾರರಿಗೆ ಕಾನೂನಾತ್ಮಕವಾಗಿ ಸಿಗುವ ಸೌಲಭ್ಯಗಳನ್ನು ಒದಗಿಸಲು ಹೊಸ ಕಾನೂನು ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಸಂಖ್ಯೆ ದೃಷ್ಟಿಯಿಂದ ಹೆಚ್ಚಿರುವ ಹಿಂದುಳಿದ ವರ್ಗಗಳನ್ನಷ್ಟೇ ಅಲ್ಲ, ಸಣ್ಣಪುಟ್ಟ ಸಮುದಾಯಗಳನ್ನೂ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಗುರಿ ಇರಿಸಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಸಮಗ್ರ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿಯೇ ಈ ಎಲ್ಲ ಸಮುದಾಯಗಳ ಸಂಘಸಂಸ್ಥೆಗಳ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸ್ಥಳ ಹಾಗೂ ಅಗತ್ಯ ಹಣಕಾಸು ನೆರವು ನೀಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ 45 ಜಾತಿಗಳು ಈ ಆದ್ಯತೆಯ ಪಟ್ಟಿಯಲ್ಲಿವೆ ಎಂದು ಘೋಷಿಸಿದರು.
ಶಿಕ್ಷಣದಿಂದಷ್ಟೇ ಬದಲಾವಣೆ ಸಾಧ್ಯ. ಕುಲಕಸುಬುಗಳನ್ನಷ್ಟೇ ನಂಬಿ ಬದುಕುವ ಕಾಲ ಹೋಯಿತು. ಜಾಗತೀಕರಣ, ಖಾಸಗೀಕರಣದಿಂದ ಮೀಸಲಾತಿಯ ಲಾಭ ಕಡಿಮೆಯಾಗುತ್ತಿದೆ. ಆದ್ದರಿಂದ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಶೈಕ್ಷಣಿವಾಗಿ ಸಬಲರಾಗಬೇಕೆಂದು ಹಿಂದುಳಿದ ವರ್ಗಗಳಿಗೆ ಕರೆ ನೀಡಿದರು.
ಅಂಬೇಡ್ಕರ್ ಅವರು ಹೇಳಿರುವಂತೆ ಶಿಕ್ಷಣ, ಸಂಘಟನೆ, ಹೋರಾಟ. ಈ ಮೂರು ಮಂತ್ರಗಳು ಹಿಂದುಳಿದ ಜಾತಿಗಳು ಮುಖ್ಯ ವಾಹಿನಿಗೆ ಬರಲು ಮಾನದಂಡವಾಗಿವೆ. ಶಿಕ್ಷಣ ಪಡೆಯದೇ, ಸಂಘಟಿತರಾಗಿ ಹೋರಾಟ ಮಾಡದೇ ಇದ್ದರೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಪ್ರಮೋದ್ ಮಧ್ವರಾಜ್, ಎಂ.ಕೃಷ್ಣಪ್ಪ, ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಜಿ.ಮಾದೇಗೌಡ, ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಎಸ್.ಪುಟ್ಟಣ್ಣಯ್ಯ, ಪಿ.ಎಂ.ನರೇಂದ್ರಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ರಮೇಶ್ ಬಂಡಿಸಿದ್ದೇಗೌಡ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಜಿಪಂ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಮುಡಾ ಅಧ್ಯಕ್ಷ ಮುನಾವರ್ ಖಾನ್, ಅಖಿಲ ಕರ್ನಾಟಕ ಅಂಬಿಗರ ಚೌಡಯ್ಯ ಮಹಾಸಭಾ ಗೌರವಾಧ್ಯಕ್ಷ ಡಾ.ಜಿ.ಶಂಕರ್, ರಾಜ್ಯಾಧ್ಯಕ್ಷೆ ಅಂಬಿಕಾ ಜಾಲಗಾರ್, ಕಾರ್ಯಾಧ್ಯಕ್ಷ ಜಯ.ಸಿ ಕೋಟ್ಯಾನ್, ಜಿಲ್ಲಾ ಗಂಗಾಮತಸ್ಥ(ಬೆಸ್ತ)ರ ಸಂಘದ ಅಧ್ಯಕ್ಷ ಎನ್.ನಂಜುಂಡಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶಿವಣ್ಣ, ಇತರ ಮುಖಂಡರು ಉಪಸ್ಥಿತರಿದ್ದರು.







