ಬಿಜೆಪಿ ಜನರ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದೆ: ಎಚ್.ಎಂ.ರೇವಣ್ಣ

ಮಂಡ್ಯ, ಅ.29: ದೇವರಾಜ ಅರಸು ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರಾಜ್ಯದಲ್ಲಿ ಉತ್ತಮ ಮತ್ತು ಪಾರದರ್ಶಕ ಆಡಳಿತ ನಡೆಸುತ್ತಿದ್ದಾರೆ. ನಾಲ್ಕು ಮುಕ್ಕಾಲು ವರ್ಷದ ಅವಧಿಯಲ್ಲಿ ಕಳಂಕರಹಿತ ಆಡಳಿತವನ್ನು ಸಹಿಸದ ಬಿಜೆಪಿ ಅನಗತ್ಯ ಮತ್ತು ಆಧಾರರಹಿತ ಆರೋಪಗಳನ್ನು ಮಾಡುವುದರ ಮೂಲಕ ಜನರ ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಆದರೆ, ಇದು ಫಲಿಸುವುದಿಲ್ಲ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಯಾವುದೇ ಹಗರಣಗಳು ಇಲ್ಲದ ಕಾರಣ ಬಿಜೆಪಿ ರಾಜ್ಯದಲ್ಲಿ ಕೋಮು ಭಾವನೆಯನ್ನು ಕೆರಳಿಸುವಯತ್ನ ನಡೆಸುತ್ತಿದೆ. ಅದಕ್ಕಾಗಿಯೇ ಟಿಪ್ಪುಸುಲ್ತಾನ್ ಜಯಂತಿ ವಿರೋಧಿಸುತ್ತಿದೆ ಎಂದರು.
ಹಿಂದುಳಿದ ಜನಾಂಗ ಸೇರಿದಂತೆ ಎಲ್ಲ ಶೋಷಿತ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಅಧಿಕಾರ ಮತ್ತು ಸವಲತ್ತು ಹಂಚಿಕೆಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೀಸಲಾತಿ ಪ್ರಮಾಣವನ್ನು ಶೇ.50 ರಿಂದ 70ಕ್ಕೆ ಏರಿಸಿ ಸಂವಿಧಾನಾತ್ಮಕವಾದಂತಹ ಕಾನೂನನ್ನು ರೂಪಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.
ಈಗಾಗಲೇ ರಾಜ್ಯ ಸರಕಾರ 80 ವರ್ಷಗಳ ನಂತರ ಇಡೀ ದೇಶದಲ್ಲೇ ಪ್ರಥಮವಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಅಧ್ಯಯನವನ್ನೊಳಗೊಂಡ ಜಾತಿ ಸಮೀಕ್ಷೆ ನಡೆಸಿದ್ದು, ಈ ವರದಿಯನ್ವಯ ಮೀಸಲಾತಿ ಏರಿಕೆ ಪ್ರಸ್ತಾವನೆಯನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಇಚ್ಚಿಸಿದೆ ಎಂದು ವಿವರಿಸಿದರು.
ತಮಿಳುನಾಡಿನಲ್ಲಿ ಶೇ.65ರ ಮೀಸಲಾತಿ ಅನುಷ್ಠಾನದಲ್ಲಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಮೀಸಲಾತಿ ಏರಿಕೆ ಜಾರಿಗೊಳಿಸುವ ಮಹತ್ವದ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಆ ಮೂಲಕ ಎಲ್ಲ ವರ್ಗದವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಮತ್ತು ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸುವುದು ಉದ್ದೇಶವಾಗಿದೆ ಎಂದು ನುಡಿದರು.
ಜನಸ್ನೇಹಿ ಸಾರಿಗೆ: ಸಮಾಜ ಕಲ್ಯಾಣ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ನಿರಂತರವಾಗಿ ಜನರೊಡನೆ ಒಡನಾಟ ಇರುವಂತಹ ಇಲಾಖೆಗಳು. ಅದೇ ರೀತಿ ಸಾರಿಗೆ ಕೂಡ ಜನಸಂಪರ್ಕ ಇಲಾಖೆಯಾಗಿದ್ದು, ಇದನ್ನು ಜನಸ್ನೇಹಿ ಇಲಾಖೆಯನ್ನಾಗಿ ಮತ್ತಷ್ಟು ಬಲಪಡಿಸಲಾಗುವುದು ಎಂದು ರೇವಣ್ಣ ತಿಳಿಸಿದರು.
ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಮಂಜೇಗೌಡ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎನ್.ದೊಡ್ಡಯ್ಯ, ಟಿಪ್ಪು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಮ್ಜದ್‍ಪಾಷ, ವಿಶ್ವಕರ್ಮ ನಿಗಮದ ನಿರ್ದೇಶಕ ಕೆ.ಸಿ. ಪ್ರಕಾಶ್, ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಸಾತನೂರು ರಾಜು, ಇತರ ಮುಖಂಡರು ಹಾಜರಿದ್ದರು.







