ಶೇಖ್ ಹಸೀನಾ ಕೊಲೆ ಯತ್ನ ಪ್ರಕರಣ: 11 ಆರೋಪಿಗಳಿಗೆ 20 ವರ್ಷ ಜೈಲು

ಢಾಕಾ,ಅ.29: 28 ವರ್ಷಗಳ ಹಿಂದೆ ಬಾಂಗ್ಲಾದೇಶದ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ಹತ್ಯೆಗೆ ಯತ್ನಿಸಿದ್ದ 11 ಮಂದಿಗೆ ಬಾಂಗ್ಲಾದೇಶದ ನ್ಯಾಯಾಲಯವೊಂದು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 1989ರಲ್ಲಿ ಹಸೀನಾರನ್ನು ಅವರ ನಿವಾಸದಲ್ಲಿ ಹತ್ಯೆಗೆಯಲು ಯತ್ನಿಸಲಾಗಿತ್ತು. ಆ ದಿನದಂದೇ ಬಾಂಬ್ ಸ್ಫೋಟಗಳನ್ನು ನಡೆಸಿದ್ದಕ್ಕಾಗಿ ಆರೋಪಿಗಳಿಗೆ ನ್ಯಾಯಾಲಯವು ಪ್ರತ್ಯೇಕವಾಗಿ ಜೀವಾವಧಿ ಶಿಕ್ಷೆಯನ್ನು ಕೂಡಾ ಘೋಷಿಸಿದೆ.
1989ರ ಆಗಸ್ಟ್ 11ರಂದು ಶಸ್ತ್ರಾಸ್ತ್ರಗಳೊಂದಿಗೆ ಎರಡು ದ್ವಿಚಕ್ರವಾಹನಗಳಲ್ಲಿ ಆಗಮಿಸಿದ, ಬಾಂಗ್ಲಾ ಫ್ರೀಡಂ ಪಾರ್ಟಿ (ಬಿಎಫ್‌ಪಿ) ಪಕ್ಷದ 7-8 ಮಂದಿ ಕಾರ್ಯಕರ್ತರು ಹಸೀನಾ ನಿವಾಸಕ್ಕೆ ನುಗ್ಗಲು ಯತ್ನಿಸಿದ್ದರು. ಅಲ್ಲಿ ನಿಯೋಜಿತರಾಗಿದ್ದ ಪೊಲೀಸ್ ಅಧಿಕಾರಿಗಳು ದಾಳಿಕೋರರ ಮೇಲೆ ಗುಂಡುಹಾರಿಸಿದಾಗ ಅವರು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ 1997ರಲ್ಲಿ 16 ಮಂದಿಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು.
ಹಸೀನಾ ಅವರ ತಂದೆ, ‘ಬಂಗಬಂಧು’ ಶೇಖ್ ಮುಜಿಬುರ್ರಹ್ಮಾನ್ ಅವರನ್ನು 1975ರಲ್ಲಿ ಹತ್ಯೆಗೈಯಲಾಗಿತ್ತು. ಮುಜೀಬುರ್ರಹ್ಮಾನ್ ಹತ್ಯೆಯ ಬಳಿಕ ಹಸೀನಾರ ಕೊಲೆಗೆ 19 ಬಾರಿ ಯತ್ನಿಸಲಾಗಿದೆ ಎಂದು ಆಡಳಿತಾರೂಢ ಅವಾಮಿಲೀಗ್ ಪಕ್ಷವು ಆಪಾದಿಸಿದೆ.





