ಮರಕ್ಕೆ ಮದುವೆ ದಿಬ್ಬಣದ ಕ್ಯಾಂಟರ್ ಢಿಕ್ಕಿ: 8 ಮಂದಿ ಮೃತ್ಯು, 20 ಮಂದಿ ಗಾಯ

ಮದ್ದೂರು, ಅ.29: ಮದುವೆ ದಿಬ್ಬಣದ ಕ್ಯಾಂಟರ್ ವಾಹನೊಂದು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಮೂರು ವರ್ಷದ ಮಗು ಸೇರಿ 8 ಮಂದಿ ಮೃತಪಟ್ಟು, ಸುಮಾರು 20 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಮಾಚಳ್ಳಿ ಗೇಟ್-ತೊರೆಶೆಟ್ಟಹಳ್ಳಿ ಬಳಿ ರವಿವಾರ ರಾತ್ರಿ ನಡೆದಿದೆ.
ಸರೋಜಮ್ಮ(55) ಸಪ್ಪೆ ಬೋರಯ್ಯನ ಪತ್ನಿ ಬೀರಮ್ಮ(50), ಜಯಮ್ಮ(55), ರೇವಣ್ಣನ ಪತ್ನಿ ಪಾರ್ವತಮ್ಮ(60), ಮಾದಮ್ಮ(60), ಶಿವಣ್ಣ(45), ಪೂಜಾ (16) ಹಾಗೂ ಮೂರು ವರ್ಷದ ಸೋನು ಮೃತಪಟ್ಟವರೆಂದು ಗುರುತಿಸಲಾಗಿದೆ.
ಮೃತಪಟ್ಟವರನ್ನು ತಾಲೂಕಿನ ಯಡಾನಹಳ್ಳಿ ಹಾಗೂ ಅವಸರದಹಳ್ಳಿಯವರು ಎಂದು ತಿಳಿದು ಬಂದಿದ್ದು, ಗಾಯಗೊಂಡವರನ್ನು ಮದ್ದೂರು ಸಾರ್ವಜನಿಕರ ಆಸ್ಪತ್ರೆ ಮತ್ತು ಮಂಡ್ಯ ಜಿಲ್ಲಾಸ್ಪತ್ರೆಯ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮದ್ದೂರಿನ ಶಿವಪುರದ ಶ್ರೀ ವೆಂಕಟೇಶ್ವರ ಸಮುದಾಯ ಭವನದಲ್ಲಿ ನಡೆಯುತ್ತಿದ್ದ ಯಡಾನಹಳ್ಳಿ ಗ್ರಾಮದ ವಧುವಿನ ಆರತಕ್ಷತೆಗೆ ಬರುತ್ತಿದ್ದಾಗ, ಚಾಲಕನ ಅಜಾಗರೂಕತೆಯಿಂದ ಕ್ಯಾಂಟರ್ ರಸ್ತೆಬದಿಯ ಮರಕ್ಕೆ ಢಿಕ್ಕಿ ಹೊಡೆದು ಪರಿಣಾಮ ಬೀರಮ್ಮ, ಜಯಮ್ಮ, ಪಾರ್ವತಮ್ಮ ಸ್ಥಳದಲ್ಲೇ ಮೃತಪಟ್ಟರೆ, ಶಿವಣ್ಣ, ಪೂಜಾ ಮದ್ದೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮತ್ತು ಮಾದಮ್ಮ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದ್ದು, ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಅಪಘಾತದ ರಭಸಕ್ಕೆ ವಾಹನ ನಜ್ಜುಗುಜ್ಜಾಗಿದೆ.
ಶಾಸಕ ಡಿ.ಸಿ.ತಮ್ಮಣ್ಣ, ಎಸ್ಪಿ ಜಿ.ರಾಧಿಕಾ, ಎಎಸ್ಪಿ ಲಾವಣೈ, ಮದ್ದೂರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮತ್ತು ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು.
ಈ ಬಗ್ಗೆ ಕೆಸ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







