ನ.10ಕ್ಕೆ ಟಿಪ್ಪು ಜಯಂತಿ ಆಚರಣೆಗೆ ಸಹಕರಿಸಲು ಮನವಿ
ಸುಂಟಿಕೊಪ್ಪ, ಅ.29: ರಾಜ್ಯ ಸರಕಾರ ನ.10ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪುಜಯಂತಿಗೆ ಜಿಲ್ಲೆಯ ಜನತೆ ಅಡ್ಡಿಪಡಿಸದೇ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ಆಚರಿಸಲು ಸಹಕರಿಸುವಂತೆ ಮೈಸೂರು ವಲಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ. ಉಸ್ಮಾನ್ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಉಸ್ಮಾನ್ ಅವರು, ರಾಜ್ಯ ಸರಕಾರವು ಅನೇಕ ಮಹನೀಯರ, ಸ್ವಾತಂತ್ರ್ಯ ಹೋರಾಟಗಾರರ ಮತ್ತು ದಾರ್ಶನಿಕರ ಜನ್ಮದಿನವನ್ನು ಆಚರಿಸುತ್ತಿದೆ. ಅದೇ ರೀತಿ ಸರಕಾರಿ ಕಾರ್ಯಕ್ರಮವಾಗಿ ಟಿಪ್ಪುಜಯಂತಿಯನ್ನು ರಾಜ್ಯ ಸರಕಾರವೇ ಆಚರಿಸುತ್ತಿದೆ. ಕೆಲವರು ಇತಿಹಾಸದಲ್ಲಿ ಆಧಾರವೇ ಇಲ್ಲದೇ ದಾಖಲಾಗಿರುವ ಕೆಲವೊಂದು ಘಟನೆಗಳನ್ನೇ ಹಿಡಿದುಕೊಂಡು ಜನರನ್ನು ತಪ್ಪುಹಾದಿಗೆ ಎಳೆಯುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಟಿಪ್ಪುವಿನ ಬಗ್ಗೆ ಋಣಾತ್ಮಕವಾಗಿ ಯೋಚಿಸುವವರು ಆತನಲ್ಲಿದ್ದ ಒಳ್ಳೆಯ ಗುಣಗಳನ್ನು ಮತ್ತು ಅವರ ಔದಾರ್ಯತೆ, ಪರಮಸಹಿಷ್ಣುತೆಯನ್ನು ಮರೆಮಾಚುತ್ತಿದ್ದಾರೆ. ಟಿಪ್ಪು ಪರಮತ ಸಹಿಷ್ಣು ಹಾಗೂ ಇತರೆ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತಿದ್ದ ಎನ್ನುವುದಕ್ಕೆ ಟಿಪ್ಪು ವಿವಿಧ ದೇವಾಲಯಕ್ಕೆ ನೀಡಿರುವ ಕೊಡುಗೆ, ದಾನ ದತ್ತಿಗಳೇ ಸಾಕ್ಷಿಯಾಗಿವೆ. ಶೃಂಗೇರಿ ದೇವಸ್ಥಾನಕ್ಕೆ ದೇವಿಯ ವಿಗ್ರಹ ಮತ್ತು ಮೂರ್ತಿ ಪ್ರತಿಷ್ಠಾಪನೆ, ಶೃಂಗೇರಿ ಶಾರದಾಂಬೆಗೆ ಚಿನ್ನದ ಜರಿ ಸೀರೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಟಿಪ್ಪು ಜಯಂತಿಯನ್ನು ಆಚರಿಸಲೇ ಬಾರದು ಮತ್ತು ಅದರಲ್ಲಿ ಭಾಗವಹಿಸಲೇ ಬಾರದು ಎಂದು ಕೆಲವರು ಆದೇಶ ಹೊರಡಿಸುವುದು ನ್ಯಾಯಸಮ್ಮತವಲ್ಲ ಹಾಗೂ ಅದು ಪ್ರಜಾಪ್ರುತ್ವ ವಿರೋಧಿಯಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಯಾರದೇ ಒತ್ತಡ, ಪ್ರತಿಭಟನೆಗೆ ಮಣಿಯದೇ ಟಿಪ್ಪುಜಯಂತಿಯನ್ನು ಶಾಂತಿಯುತವಾಗಿ ಸರ್ವರ ಸಹಕಾರ ಹಾಗೂ ಬೆಂಬಲದೊಂದಿಗೆ ಆಚರಿಸಲು ಕ್ರಮಕೈಗೊಳ್ಳಲಿ ಮತ್ತು ಟಿಪ್ಪು ಜಯಂತಿಯಲ್ಲಿ ಭಾಗವಹಿಸುವವರಿಗೆ ರಕ್ಷಣೆ ನೀಡಲಿ ಎಂದು ಉಸ್ಮಾನ್ ಅವರು ಒತ್ತಾಯಿಸಿದ್ದಾರೆ.







