ಅಳಿವಿನಂಚಿನಲ್ಲಿ ಜಾನಪದ ಸಾಹಿತ್ಯ: ಮೋಹನ್ ವಿಷಾದ
ಬಣಕಲ್, ಅ.29: ಜಾನಪದ ಸಾಹಿತ್ಯವು ಅನುಭವಿಸಿ ಹಾಡುವ ಕಲೆಯಾಗಿದೆ. ಪುರಾತನ ಕಾಲದಿಂದ ಜನರು ಒಂದೆಡೆ ಸೇರಿ ಜಾನಪದ ಸಾಹಿತ್ಯವನ್ನು ಸರ್ವರಿಗೂ ಉಣ ಬಡಿಸುತ್ತಿದ್ದರು. ಆದರೆ, ಆಧುನಿಕ ಭರಾಟೆಯಲ್ಲಿ ಜಾನಪದ ಸಾಹಿತ್ಯ ಅಳಿವಿನಂಚಿನಲ್ಲಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಬಣಕಲ್ ಕಸಾಪ ಹೋಬಳಿ ಅಧ್ಯಕ್ಷ ಮೋಹನ್‌ಕುಮಾರ್‌ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.
ಬಣಕಲ್‌ನ ಚೇಗು ಗ್ರಾಮದ ಸಮುದಾಯಭವನದಲ್ಲಿ ಯೋಜಿಸಲಾಗಿದ್ದ ‘ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ಕಲಾ ಪ್ರಕಾರಗಳಾದ ಶೋಭಾನೆ ಪದ, ಗೀಗೀ ಪದಗಳು, ಕೋಲಾಟ, ನಾಟಿ ಹಾಡು ಮೊದಲಾದವುಗಳು ಪುರಾತನ ಸೊಗಡಿನ ಜಾನಪದ ಕಲೆಯನ್ನು ಜನರು ಜೀವನದಲ್ಲಿ ಅನುಭವಿಸಿದ್ದನ್ನು ಹಾಡಿನ ಮುಖಾಂತರ ಹಾಡಿ ಮನರಂಜಿಸುತ್ತಿದ್ದರು ಎಂದು ತಿಳಿಸಿದರು.
ಪಿಎಂಜಿಆರ್‌ವೈ ಕೇಂದ್ರ ಸಲಹಾ ಸಮಿತಿಯ ಸದಸ್ಯ ದೀಪಕ್ ದೊಡ್ಡಯ್ಯ ಮಾತನಾಡಿ, ಜಾನಪದ ಕಲೆಗೆ ಯಾವುದೇ ಪಂಥವಿಲ್ಲ. ಕೆಳವರ್ಗ, ಮೇಲ್ವರ್ಗ ಎಂಬ ಜಾತಿ ತಾರತಮ್ಯವಿಲ್ಲ. ಆಧುನಿಕತೆಯಿಂದ ಜನರು ಮೊಬೈಲ್, ದೃಶ್ಯ ಮಾಧ್ಯಮಗಳತ್ತ ಒಲವು ತೋರುತ್ತಿದ್ದು, ಸಂಸ್ಕಾರವನ್ನು ಮರೆಯುತ್ತಿದ್ದಾರೆ. ಪೋಷಕರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ಕಲಿಸಿಕೊಡುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ, ಕನ್ನಡ ಭಾಷೆ ಸುಲಭದ ಭಾಷೆಯಾಗಿದೆ.ಅದರಲ್ಲೂ ಕನ್ನಡ ಜಾನಪದ ಹಾಡಿನ ಸೊಗಡು ಕೇಳಲು ಸ್ವಾರಸ್ಯಮಯವಾಗಿದೆ. ಆದರೆ, ಜನಪದ ಕಲೆ ಅಳಿಯುವ ಹಂತದಲ್ಲಿರುವುದು ವಿಷಾದದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಬಕ್ಕಿ ಮಂಜುನಾಥ್ ಮತ್ತು ಸಂಗಡಿಗರಿಂದ ಹಾಗೂ ಚೇಗು ಗ್ರಾಮದ ಮಕ್ಕಳಿಂದ ಹಾಡು ಮತ್ತು ವಿವಿಧ ಮನೋರಂಜನಾ ಕಾರ್ಯಕ್ರಮ ನಡೆದವು.
ಈ ಸಂದರ್ಭದಲ್ಲಿ ಬಣಕಲ್ ಗ್ರಾಪಂ ಸದಸ್ಯೆ ಭಾರತಿ, ಶಿಕ್ಷಕ ಜೈಪಾಲ್, ನಾಗರಾಜ್, ವಸಂತ್, ಭಕ್ತೇಶ್, ಶೇಖರಪ್ಪ, ಪದ್ಮನಾಭ ಪೂಜಾರಿ, ಶೀನ, ಮುತ್ತಪ್ಪ, ಜಗದೀಶ್, ಸುನಂದ, ಭಾಗ್ಯಾಶ್ರೀ, ಸಂಗೀತಾ ಮತ್ತಿತರರು ಉಪಸ್ಥಿತರಿದ್ದರು.







